ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದ ಪ್ರಕರಣ ಇದೀಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಇಂದು ( ಜನವರಿ 29 ) ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜತೆಗೂಡಿ ಕೆರಗೋಡು ಗ್ರಾಮದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ಈ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಹೆಚ್‌ಡಿ ಕುಮಾರಸ್ವಾಮಿ ರೀತಿಯ ಬಲಿಷ್ಠ ನಾಯಕರೂ ಸಹ ಇದರಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿ ಆಕ್ರೋಶ ಹೊರಹಾಕಿದ್ದರು.
ಇದೀಗ ಇದರ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಾಣಿಗ ತ್ರಿರಂಗ ನಡಿಗೆ ಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಮಾತನಾಡಿದ ರವಿ ಗಾಣಿಗ ನಾನು ಶಾಂತಿ ಸಭೆ ಮಾಡಲು ಹೋಗಿದ್ರೆ ನನ್ನ ಕೊಲೆ ಮಾಡಿರುತ್ತಿದ್ರು. ನನ್ನ ಫ್ಲೆಕ್ಸ್ ಅನ್ನೇ ಬಿಡಲಿಲ್ಲ, ಇನ್ನು ನಾನು ಹೋಗಿದ್ರೆ ಬಿಡುತ್ತಿದ್ರಾ? ನನಗೂ ಕೇಸರಿ ಧ್ವಜದ ವಿಚಾರಕ್ಕೂ ಸಂಬಂಧವಿಲ್ಲ. ಶಾಂತಿ ಕಾಪಾಡುವ ಉದ್ದೇಶದಿಂದ ನಾವು ಶಾಂತಿ ಯಾತ್ರೆ ಮಾಡುತ್ತೇವೆ. ಶೀಘ್ರದಲ್ಲಿಯೇ ಶಾಂತಿ ಯಾತ್ರೆಯ ದಿನಾಂಕವನ್ನು ಘೋಷಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿದ ರವಿ ಗಾಣಿಗ ನಾನು ಸಹ ಹಿಂದೂ, ಎಲ್ಲಾ ದೇವರನ್ನೂ ಪೂಜೆ ಮಾಡುತ್ತೇನೆ. ಮಂಡ್ಯದ ಆರ್‌ಎಸ್‌ಎಸ್ ಕಚೇರಿಗೆ ಹೋಗಿ ಒಂದು ಲಕ್ಷ ದೇಣಿಗೆ ನೀಡಿದ್ದೇನೆ. ಜನವರಿ 22ರಂದು ಸ್ಥಳೀಯ ರಾಮಮಂದಿರಕ್ಕೆ ಹೋಗಿದ್ದೇನೆ. ಇವರಿಂದ ದೇವರ ಪೂಜೆ ಮಾಡುವುದನ್ನು ನಾನು ಕಲಿಯಬೇಕಿಲ್ಲ. ನಮ್ಮ ಇಂಟೆಲಿಜೆನ್ಸ್ ವಿಫಲವಾಗಿದೆ. ಇಷ್ಟು ದೊಡ್ಡ ಗಲಾಟೆಯಾಗಿದೆ. ಹೊರಗಿನಿಂದ ಬಂದು ಗಲಾಟೆ ಮಾಡಿದ್ದಾರೆ. ನಮ್ಮ ಇಂಟೆಲಿಜೆನ್ಸ್‌ನವರು ಯಾಕೆ ಅವರನ್ನು ಒಳಗೆ ಬಿಟ್ಟರು. ಇದರ ಬಗ್ಗೆ ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.





