ಚೆನ್ನೈ: ನನ್ನ ತಂದೆ ರಜಿನಿಕಾಂತ್ ಅವರು ಸಂಘಿ ಅಲ್ಲ. ಅವರು ಸಂಘಿಯಾಗಿದ್ದರೆ “ಲಾಲ್ ಸಲಾಂ”ನಂತಹ ಸಿನಿಮಾ ಮಾಡುತ್ತಿರಲಿಲ್ಲ ಎಂದು ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಪುತ್ರಿ ಐಶ್ವರ್ಯ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.
ಚೆನ್ನೈನಲ್ಲಿ ಜನವರಿ 26ರಂದು ರಜಿನಿಕಾಂತ್ ಅಭಿನಯದ “ಲಾಲ್ ಸಲಾಂ” ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆಗೆ “ಸಂಘ” ಎಂಬ ಹಣೆಪಟ್ಟಿ ಕಟ್ಟಲಾಗುತ್ತಿರುವ ಕುರಿತು ಅವರು ಮಾತನಾಡುತ್ತಿದ್ದರು. ವೇದಿಕೆಯಲ್ಲಿ ನಿಂತು ತಮ್ಮ ಬಗ್ಗೆ ಹಾಗೂ ಸಿನೆಮಾದ ಬಗ್ಗೆ ಐಶ್ವರ್ಯ ಮಾತನಾಡುತ್ತಿದ್ದಾಗ ರಜಿನಿಕಾಂತ್ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು indiatoday.in ವರದಿ ಮಾಡಿದೆ.
ಅಯೋಧ್ಯೆಗೆ ಭೇಟಿ ನೀಡಿದ್ದ ನಟ ರಜನೀಕಾಂತ್, ‘500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ. ಈ ದಿನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ದಿನ’ ಎಂದಿದ್ದರು. ನಿರ್ದೇಶಕ ಪಾ ರಂಜಿತ್, ರಜನೀಕಾಂತ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ‘500 ವರ್ಷಗಳ ಹಿಂದಿನ ಸಮಸ್ಯೆ ಎಂದು ಹೇಳಿರುವುದು ಸೂಕ್ತವಲ್ಲ. ನಾವು ಈ ಪ್ರಕ್ರಿಯೆಯ ಹಿಂದಿನ ರಾಜಕೀಯವನ್ನು ಪ್ರಶ್ನೆ ಮಾಡಬೇಕಿದೆ’ ಎಂದು ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ಟೀಕೆ ನಡೆಸಿದ್ದರು.
ಪಾ ರಂಜಿತ್ ಹೇಳಿಕೆಗೆ ಬೆಂಬಲ ಸೂಚಿಸಿದ್ದ ಕೆಲವರು ರಜನೀಕಾಂತ್ ಅವರನ್ನು ʼಸಂಘʼ ನೆಂದು ಟೀಕೆ ಮಾಡಿದ್ದರು. ರಜನೀಕಾಂತ್ ಅವರು ‘ತಾವು ರಾಜಕಾರಣಿಯಲ್ಲ, ತಮಗೆ ರಾಜಕೀಯದ ಅವಶ್ಯಕತೆ ಇಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದರು ಸಹಾ ಅವರ ಮೇಲೆ ನಿರಂತರವಾಗಿ ಟೀಕೆಗಳು ನಡೆಯುತ್ತಲೇ ಇತ್ತು. ಈ ಬಗ್ಗೆ ರಜನಿಕಾಂತ್ ಪುತ್ರಿ ಟೀಕಾಕಾರರಿಗೆ ಪ್ರುತ್ಯುತ್ತರ ನೀಡಿದ್ದಾರೆ.
”ನನ್ನ ತಂದೆ ಲಾಲ್ ಸಲಾಂ ಚಿತ್ರದ ಸ್ಕ್ರಿಪ್ಟ್ ಅನ್ನು ಕೇಳಿದಾಗ ಮೊಯ್ದಿನ್ ಭಾಯಿ ಪಾತ್ರ ತನಗೆ ಮಾಡಬಹದೇ ಎಂದು ತಂದೆ ನನ್ನನ್ನು ಕೇಳಿದರು. ಆರಂಭದಲ್ಲಿ ಹಿಂಜರಿದೆ. ಆ ಪಾತ್ರಕ್ಕೆ ಅವರನ್ನು ಆರಿಸುವ ಬಗ್ಗೆ ನಾನು ಅವರು ಸೂಚಿಸುವ ತನಕ ಯೋಚಿಸಲೇ ಇಲ್ಲ,” ಎಂದು ಐಶ್ವರ್ಯ ಹೇಳಿದರು.
ಲಾಲ್ ಸಲಾಂ ಒಂದು ಸೂಕ್ಷ್ಮ ವಿಚಾರದ ಸಿನೆಮಾ ಆಗಿದ್ದು ಮಾನವೀಯ ವ್ಯಕ್ತಿ ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಹೇಳಿ ತಂದೆಗೆ ಅವರು ಧನ್ಯವಾದ ತಿಳಿಸಿದರು. ಫೆಬ್ರವರಿ 9 ರಂದು ʼಲಾಲ್ ಸಲಾಂʼ ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.