Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಮ್ಮ ಸರ್ಕಾರ ಉರುಳಿಸಲು ಎಎಪಿಯ 7 ಶಾಸಕರಿಗೆ ಹಣದ ಆಮಿಷ: ಸಿಎಂ ಕೇಜ್ರಿವಾಲ್‌ ಆರೋಪ

ನವದೆಹಲಿ: ದೆಹಲಿಯಲ್ಲಿನ ನಮ್ಮ ಎಎಪಿ (ಆಮ್‌ಆದ್ಮಿ ಪಾರ್ಟಿ) ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದು, ಎಎಪಿಯ 7 ಮಂದಿ ಶಾಸಕರಿಗೆ 25 ಕೋಟಿ ರೂ ಹಣದ ಆಮಿಷ ಒಡ್ಡಲಾಗಿದೆ ಎಂದು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ರ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದಾರೆ.

ಇಂದು (ಶನಿವಾರ) ಈ ಕುರಿತು ತಮ್ಮ ಅಧಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಕೇಜ್ರಿವಾಲ್‌, ಇತ್ತೀಚೆಗಷ್ಟೇ ದೆಹಲಿಯ ನಮ್ಮ 7 ಶಾಸಕರನ್ನು ಸಂಪರ್ಕಿಸಿ, ‘ಕೆಲ ದಿನಗಳ ನಂತರ ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ನಂತರ ನಿಮ್ಮ ಶಾಸಕರನ್ನು ಒಡೆಯುತ್ತೇವೆ. 21 ಶಾಸಕರೊಂದಿಗೆ ಮಾತುಕತೆಯೂ ಸಹ ನಡೆಸಲಾಗಿದೆ. ಇತರರೊಂದಿಗೂ ಮಾತನಾಡುತ್ತೇವೆ. ಆದಾದ ಮೇಲೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವೂ ಕೂಡ ಬರಬಹುದು. 25 ಕೋಟಿ ರೂ. ನೀಡುತ್ತೇವೆ, ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿದ್ದಾರೆ.

ಅವರು 21 ಶಾಸಕರನ್ನು ಸಂಪರ್ಕಿಸಿರುವುದಾಗಿ ಹೇಳಿಕೊಂಡರೂ ನಮ್ಮ ಮಾಹಿತಿಯ ಪ್ರಕಾರ ಅವರು ಇದುವರೆಗೆ 7 ಶಾಸಕರನ್ನು ಮಾತ್ರ ಸಂಪರ್ಕಿಸಿದ್ದಾರೆ ಮತ್ತು ಅವರೆಲ್ಲರೂ ನಿರಾಕರಿಸಿದ್ದಾರೆ.

ಇದರರ್ಥ ಯಾವುದೇ ಮದ್ಯದ ಹಗರಣದ ತನಿಖೆಗಾಗಿ ನನ್ನನ್ನು ಬಂಧಿಸಲಾಗುತ್ತಿಲ್ಲ ಆದರೆ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ನಮ್ಮ ಸರ್ಕಾರವನ್ನು ಬೀಳಿಸಲು ಅನೇಕ ಷಡ್ಯಂತ್ರಗಳನ್ನು ರೂಪಿಸಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸಿದರು. ನಮ್ಮ ಎಲ್ಲಾ ಶಾಸಕರು ಕೂಡ ಬಲವಾಗಿ ಜೊತೆಯಾಗಿದ್ದಾರೆ. ಈ ಬಾರಿಯೂ ಈ ಜನರು ತಮ್ಮ ಕೆಟ್ಟ ಉದ್ದೇಶಗಳಲ್ಲಿ ವಿಫಲರಾಗುತ್ತಾರೆ.

ನಮ್ಮ ಸರ್ಕಾರ ದೆಹಲಿಯ ಜನರಿಗಾಗಿ ಎಷ್ಟು ಕೆಲಸ ಮಾಡಿದೆ ಎಂಬುದು ಈ ಜನರಿಗೆ ತಿಳಿದಿದೆ. ಅವರು ಎಷ್ಟೇ ಅಡೆತಡೆಗಳನ್ನು ಸೃಷ್ಟಿಸಿದರೂ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ದೆಹಲಿಯ ಜನರು “ಎಎಪಿ” ಅನ್ನು ಅಪಾರವಾಗಿ ಪ್ರೀತಿಸುತ್ತಾರೆ. ಆದ್ದರಿಂದ, “ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸುವುದು ಅವರ ಶಕ್ತಿಯಲ್ಲಿಲ್ಲ. ಹಾಗಾಗಿ ನಕಲಿ ಮದ್ಯದ ಹಗರಣದ ನೆಪದಲ್ಲಿ ಬಂಧಿಸಿ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದಾರೆ” ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ