ಇಂದೋರ್: ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತು.
ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶಪಡಿಸಿಕೊಂಡಿತು.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ಘಾನಿಸ್ತಾನ ನಿಗದಿತ ಓವರ್‌ನಲ್ಲಿ 172 ರನ್ ಕಲೆಹಾಕಿ ಸರ್ವಪತನ ಕಂಡಿತು. ಇದನ್ನು ಚೇಸ್ ಮಾಡಿದ ಭಾರತ ತಂಡ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 173ರನ್ ಬಾರಿಸಿ ಗಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಪರ ಗುರ್ಬಾಜ್ 14, ನಬಿ 57, ಮೊಹಮ್ಮದ್ ನಬಿ 14, ನಜಿಬುಲ್ಲಾ 23 ಹಾಗೂ ಮುಜಿಬ್ 21 ರನ್ ಗಳಿಸಿ ಔಟಾದರು.
ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್ 3, ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ ಶಿವಂ ದುಬೆ 1 ವಿಕೆಟ್ ಕಬಳಿಸಿದರು.
ಇನ್ನು ಆಫ್ಘಾನ್ ನೀಡಿದ 173 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ ಮತ್ತೊಂದು ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಇನ್ನು ವಿರಾಟ್ ಕೊಹ್ಲಿ 29 ರನ್ ಬಾರಿಸಿ ನಿರ್ಗಮಿಸಿದರು. ಆದರೆ ಯುವ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ 68 ಹಾಗೂ ಶಿವಂ ದುಬೆ ಅಜೇಯ 63ರನ್ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಆಫ್ಘಾನ್ ಪರ ಕರೀಂ ಜನತ್ 2, ಫಾರೂಕಿ ಮತ್ತು ನವೀನ್ ಉಲ್ ಹಕ್ ತಲಾ 1 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ: ಅರ್ಶ್‌ದೀಪ್ ಸಿಂಗ್