ಕಲಬುರಗಿ: ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ ಸಿಎಂ ಸಿದ್ದರಾಯ್ಯ ಆಪ್ತಬಣ ಪಟ್ಟು ಹಿಡಿದಿದೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆಗಳು ಹೆಚ್ಚಾಗಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ ಹೈಕಮಾಂಡ್ ಮುಂದೆ ಪ್ರಸ್ತಾವನೆಯಿಲ್ಲ. ಈ ವಿಷಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ವಿಚಾರ ನಮ್ಮ ಮುಂದೆ ಇಲ್ಲ. ಇವೆಲ್ಲವೂ ಕೇವಲ ಉಹಾಪೋಹ. ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರಗಳು ಚರ್ಚೆಗೆ ಬರಬಾರದು. ಸದ್ಯ ಸರ್ಕಾರದ ಗಮನ ಅಭಿವೃದ್ಧಿ ಕಡೆ, ಗ್ಯಾರೆಂಟಿಗಳ ಸಮರ್ಪಕ ಅನುಷ್ಠಾನದ ಕಡೆ ಇರಬೇಕು. ನಮ್ಮ ಗುರಿ ತಲುಪುವ ತನಕ ಗಮನ ಬೇರೆಡೆಗೆ ಕೊಡಬಾರದು ಎಂದು ಕರೆ ನೀಡಿದ್ದಾರೆ.
ಇನ್ನು ನಾಳೆ(ಜನವರಿ ೧೦) ಲೋಕಸಭಾ ಚುನಾವಣೆಗೆ ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಇಳಿಸಬಾರದು ಎಂಬುದರ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರ ನೇಮಕ ಮಾಡಲಾಗಿದ್ದು, ನಾಳೆ ನಡೆಯಲಿರುವ ಸಭೆಯೊಂದಿಗೆ ಅನೇಕ ಘಟಕಗಳ ಸಭೆ ಕೂಡ ಕರೆದಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭಾರತ ಮತ್ತು ಮಾಲ್ಡೀವ್ಸ್ ಸಡುವಿನ ಬಿಗುವಿನ ವಾತಾವರಣ ಬಗ್ಗೆ ಮಾತನಾಡಿರುವ ಖರ್ಗೆ, ಮೊದಲು ನಾವು ನರೆಯವರೊಂದಿಗೆ ಚೆನ್ನಾಗಿರಬೇಕು. ಜೊತೆಗೆ ಕೆಟ್ಟ ಪರಿಸ್ಥಿತಿ ಬಂದಾಗ ಹೋರಾಟಕ್ಕೂ ಸಿದ್ದವಿರಬೇಕು. ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ಬೇರ್ಪಡಿಸಿ ಹೇಗೆ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಹಾಗೆ ಹೋರಾಟ ಮಾಡಬೇಕು. ಆದರೆ ಪ್ರಧಾನಿ ಮೋದಿ ಅವರು ಎಲ್ಲವನ್ನು ವಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.





