Mysore
29
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಹೆಣ್ಣಿಗೆ ಮಾತ್ರ ಏಕೆ ಇಷ್ಟೊಂದು ಗಡಿಗಳು?

• ಜಾಹಿಧಾ ಕೊಡಗು

ಇತ್ತೀಚೆಗಷ್ಟೇ ನಾನು ನನ್ನ ಎರಡನೆಯ ಮಗುವಿಗೆ ತಾಯಿಯಾದೆ. ಕೂಸನ್ನು ಬಸಿರಲ್ಲಿ ಹೊತ್ತು ಹಗಲು ರಾತ್ರಿ ನಿದ್ದೆಗೆಟ್ಟಿದ್ದೆ. ಏನೋ ಭಯ, ಆತಂಕ ನನ್ನೊಳಗೆ ನಿಗೂಢವಾಗಿ ಮನೆ ಮಾಡಿತ್ತು. ಇಡೀ ಕುಟುಂಬ ಹೆಣ್ಣು ಮಗುವಿನ ನಿರೀಕ್ಷೆ ಹಾಗೂ ಸಂಭ್ರಮದಲ್ಲಿದ್ದರೆ ನನಗೆ ಹೆಣ್ಣು ಮಗುವನ್ನು ನೆನೆದರೇ ಒಳಗೊಳಗೆ ಕುಸಿದಂತಾಗುತ್ತಿತ್ತು. ಈ ಸಮಾಜ ಇಂದಿಗೂ ಹೆಣ್ಣನ್ನು ಗೌರವಿಸುವ ಹಂತಕ್ಕೆ ತಲೆ ಎತ್ತದಿರುವುದೇ ನನ್ನ ಈ ಭಯ, ಆತಂಕಕ್ಕೆ ಮುಖ್ಯ ಕಾರಣವಾಗಿತ್ತು. ಅಲ್ಲದೆ ಅದೇ ಸಮಯದಲ್ಲಾದ ಮಣಿಪುರದ ಘಟನೆ ನನ್ನನ್ನು ಇನ್ನಿಲ್ಲದಂತೆ ನಡುಗಿಸಿಬಿಟ್ಟಿತ್ತು. ಹತ್ತು ವರ್ಷಗಳ ಹಿಂದಿನ ಸೌಜನ್ಯಳ ಘಟನೆ ಮರುಜೀವ ಪಡೆದು ತಾಂಡವವಾಡುತ್ತಿತ್ತು. ಮಗ ಹುಟ್ಟಿದ. ಜವಾಬ್ದಾರಿ ಇನ್ನೂ ಹೆಚ್ಚಿದೆ. ಅಂದರೆ ಈ ಬೇಟಿ ಬಚಾವೊ… ಬೇಟಿ ಪಡಾವೊಗಳಂತಹ ಬೋಗಸ್ ಪ್ಲೋಗನ್‌ಗಳು ಕೇವಲ ಪ್ರಾಸಬದ್ಧ ಮಂತ್ರಗಳಾಗಿವೆಯೇ ಹೊರತು, ಸಮಾಜದ ಕ್ರೌರ್ಯಕ್ಕೆ ಎಂದಿಗೂ ಮದ್ದಾಗಿಲ್ಲ. ಇದೆಲ್ಲವನ್ನೂ ನೋಡು ತಿದ್ದರೆ ಸುರಕ್ಷಿತವಲ್ಲದ ಸಮಾಜ ದಲ್ಲಿ ಹೆಣ್ಣು ಹುಟ್ಟುವುದೂ ಕೂಡ ಪಾಪವೇ ಅನ್ನಿಸಿಬಿಡುತ್ತದೆ. ಸಮಾಜದ ಆಂತರ್ಯ ಬದಲಾಗದೇ ಕೇವಲ ಆಶಯ, ಹಾರೈಕೆಗಳಿಂದ ಏನೂ ಪ್ರಯೋಜನವಾಗದು ಎಂಬುದು ನನ್ನ ಅನಿಸಿಕೆ.

‘ಶಕುಂತಲೆ…ನೀನು ದುಷ್ಯಂತನಿಗೆ ಕೊಡಬೇಕಾದದ್ದು, ಬೆರಳ ಉಂಗುರವನ್ನಲ್ಲ… ಒಡಲ ಉಂಗುರವನ್ನು…!’ ಇದು ನನ್ನದೊಂದು ಕಿರುಗವಿತೆ. ಶಕುಂತಲೆಯ ಬಗ್ಗೆ ಬಹಳ ಹಿಂದೆ ಓದಿದ್ದ ಯಾವುದೋ ವಿಮರ್ಶೆಯೊಂದರಲ್ಲಿ ಒಲವು, ಮರೆವು ಎಲ್ಲವನ್ನೂ ಕಳೆದು ಆಕೆಯ ಬಳಿಗೆ ಮರಳಿ ಬರುವ ದುಷ್ಯಂತ ಶಕುಂತಲೆ ಕಳೆದುಕೊಂಡಿದ್ದ ಉಂಗುರವನ್ನು ಆಕೆಗೆ ಮತ್ತೆ ನೀಡಲು ಮುಂದಾದಾಗ ಆಕೆ ಆ ಉಂಗುರದೊಂದಿಗೆ ಅವನನ್ನೂ ತಿರಸ್ಕರಿಸುತ್ತಾಳೆ. ಆ ಸಂದರ್ಭಕ್ಕೆ ನನ್ನಿಂದ ಬರೆಸಿಕೊಂಡ ಸಾಲುಗಳಿವು. ಈ ಸಾಲುಗಳಲ್ಲಿ ಶಕುಂತಲೆಯ ಸುದೀರ್ಘ ಕಾಲದ ಏಕಾಂಗಿತನ ಮತ್ತು ಅನಾಥತೆಯಿಂದ ಉಂಟಾದ ಆಕ್ರೋಶ ಮತ್ತು ಬಂಡಾಯದ ಭಾವಗಳು ಈ ‘ಮಾದರಿ ಸಮಾಜ’ಕ್ಕೆ ಕೊಟ್ಟ ಸರಿಯಾದ ಉತ್ತರ ಅಂತಲೇ ಅನಿಸಿತ್ತು.

ಎಷ್ಟೋ ಸಂದರ್ಭಗಳಲ್ಲಿ ಹೆಣ್ಣು ಗಂಡಿಗೆ ನೀಡುವ ಪ್ರತಿಕ್ರಿಯೆಗಳು ಸಂದರ್ಭಕ್ಕೆ ತಕ್ಕಂತೆ ಬಹಳ ಭಿನ್ನವಾಗುತ್ತಾ ಹೋಗಿವೆ. ಅಂದರೆ ಪುರಾಣ ಕಾಲದಿಂದಲೂ ಗಂಡಿಗೆ ಸಲ್ಲಿಸಬಹುದಾದ ಪ್ರತಿಷ್ಠೆ, ಗೌರವಗಳ ಸ್ವರೂಪವನ್ನು ಈ ಆಧುನಿಕ ಕಾಲದವರೆಗೂ ಪುರುಷ ಪ್ರಧಾನ ಸಮಾಜ ಬಹಳ ಜತನದಿಂದ ಕಾಪಿಟ್ಟುಕೊಂಡು ಬಂದಿದೆ. ಮೂಲದಲ್ಲಿ ಒಂದೇ ಆಗಿದ್ದವೆನ್ನಲಾದ ಹೆಣ್ಣು ಗಂಡಿನ ದೈಹಿಕ ಅಸ್ತಿತ್ವ ಕಾಲಾನಂತರದಲ್ಲಿ ವಿಭಜನೆಗೊಂಡವು. ಇಂದಿಗೂ ಆ ಅಸ್ತಿತ್ವಗಳು ಒಂದಾಗುವೆಡೆಗೆ ತುಡಿಯುತ್ತವೆ ಎಂಬುದನ್ನು ‘ಸಿಮೋನ್‌ ಬೋವಾ’ರವರ ‘ಸೆಕೆಂಡ್ ಸೆಕ್ಸ್’ ಪುಸ್ತಕದಲ್ಲಿ ಓದಿ ವಿಸ್ಮಯಗೊಂಡಿದ್ದೆ.

ಭೂಮಿಗಿದ್ದ ವೈಶಿಷ್ಟ್ಯಗಳನ್ನು ಹೆಣ್ಣಿನಲ್ಲೂ ಗುರುತಿಸಿದ ಪುರುಷ ತನ್ನ ಪೌರುಷ ಹಾಗೂ ಅಹಂಕಾರದಿಂದ ಹೆಣ್ಣಿನ ಜುಟ್ಟು ಬಗ್ಗಿಸಿಕೊಂಡದ್ದನ್ನು ಇದೇ ಪುಸ್ತಕದಲ್ಲಿ ಓದಿ ಕಸಿವಿಸಿಗೊಂಡಿದ್ದೆ. ಆತ ಅಂದು ಬಗ್ಗಿಸಿಕೊಂಡ ಜುಟ್ಟನ್ನು ಹೆಣ್ಣು ಇಂದಿಗೂ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿಯೇ ಇದ್ದಾಳೆ ಎಂಬ ಸತ್ಯ, ಹೆಣ್ಣಿನ ಎಷ್ಟೆಲ್ಲ ಸಾಧನೆಯ ಹಿರಿಮೆ ಗರಿಮೆಗಳನ್ನು ಮೀರಿ ಗರಿಬಿಚ್ಚಿ ನಿಂತಿದೆ. ಮುಂದೆಯೂ ಈ ಪ್ರಯತ್ನ ಮುಂದುವರೆಯುವುದಷ್ಟೇ ಸಂಪೂರ್ಣವಾಗಿ ಬಿಡಿಸಿಕೊಳ್ಳುವುದು ದುಸ್ತರವೇ ಎನಿಸುವ ಹಲವು ದುರ್ಘಟನೆಗಳು ದಿನನಿತ್ಯದ ಜೀವನದಲ್ಲಿ ಎದುರಾಗುತ್ತಲೇ ಇವೆ. ಪ್ರಸ್ತುತ ಭಾರತದ ಮಟ್ಟಿಗೆ ಇದು ಕುಸ್ತಿಪಟು ಸಾಕ್ಷಿ ಮಲ್ಲಿಕ್ ಹಾಗೂ ಮಣಿಪುರದ ಘಟನೆಗಳಲ್ಲಿ ಸಾಬೀತಾಗಿದೆ.

ಮಣಿಪುರದ ಘಟನೆಯಂತೂ ಇಡೀ ಜಗತ್ತಿನ ಪುರಾಣಗಳನ್ನೆಲ್ಲಾ ನೆನಪಿಸಿದೆ. ಇವೆರಡೂ ಘಟನೆಗಳಲ್ಲಿ ಪೌರುಷರ ಕೈಯೇ ಮೇಲಾದದ್ದು ಹೆಣ್ಣಿಗೆ ಸಲ್ಲಬೇಕಾದ ಘನತೆ ಹಾಗೂ ಗೌರವಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಹಲವು ಸಂದರ್ಭಗಳಲ್ಲಿ ಹೆಣ್ಣಿನ ಮೇಲಾಗುವ ದೌರ್ಜನ್ಯವನ್ನು ಹೆಣ್ಣೆ ಸಮರ್ಥಿಸುವಷ್ಟರ ಮಟ್ಟಿಗೆ ಪುರುಷ ಪ್ರಧಾನ ಸಮಾಜ ಹಾಗೂ ನಮ್ಮನ್ನಾಳುವ ರಾಜಕೀಯ ಪಕ್ಷಗಳು ಹೆಣ್ಣನ್ನು ಪ್ರಭಾವಿಸುತ್ತಿವೆ. ಮೇಲಿನ ಎರಡು ಘಟನೆಗಳಲ್ಲೂ ಇಂತಹ ಸಂವೇದನಾಹೀನ ಮನಸ್ಥಿತಿಗಳನ್ನು ಕಾಣ ಬಹುದು. ಆಕೆಯ ಸಾಧನೆಯನ್ನು ಕೊಂಡಾಡಿದ ಇದೇ ಸಮಾಜ ಆಕೆಗಾದ ದೌರ್ಜನ್ಯವನ್ನು ಅನುಮಾನಿಸತೊಡಗಿದ್ದು ಬಹಳ ಖೇದಕರ.

ಸಮಾಜ ಎಷ್ಟು ಕಾಲ ಹೆಣ್ಣನ್ನು ಸೀಮಾತೀತ ನೆಲೆಯಲ್ಲಿ ನಿಂತು ನೋಡದೆ ಕೇವಲ ತಳುಕು ಬಳುಕಿನ ಗಡಿಯೊಳಗೇ ನೋಡಲು ಬಯಸು ವುದೋ ಅಲ್ಲಿಯವರೆಗೂ ನೂರಾರು ಗಟ್ಟಿಗಿತ್ತಿ ಹೆಣ್ಣು ಮಕ್ಕಳು ಈ ಅಸ್ವಸ್ಥ ಸಮಾಜಕ್ಕೆ ಬಲಿಪಶು ಗಳಾಗುತ್ತಲೇ ಇರುತ್ತಾರೆ. ಅವಳ ಸಾಧನೆಗೆ ಈ ಸಮಾಜ ಹೆಮ್ಮೆ ಪಡುವ ಬದಲು ಆಕೆಯ ಉಡುಗೆ ತೊಡುಗೆಗಳಲ್ಲಿ ವಸ್ತ್ರ ಸಂಹಿತೆ, ಆಕೆಯ ಓಡಾಟದ ಸಮಯ, ಆಕೆಯ ಬೇಕು ಬೇಡಗಳಿಗೆ ನಿರ್ಬಂಧ, ಇತ್ಯಾದಿಗಳನ್ನು ನಿಗದಿ ಮಾಡುತ್ತಲೇ ಇರುತ್ತದೆ. ಜಾತಿ, ಧರ್ಮ, ರಾಜಕೀಯ ಸಂಘರ್ಷಗಳಲ್ಲಿ ಹೆಣ್ಣೆ ಬಲಿಯಾಗಬೇಕಾಗುತ್ತದೆ.
jahida 780@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!