ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಿಕೇಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ೩೨ ವರ್ಷದ ಅನುಭವಿ ಬ್ಯಾಟರ್ ಕ್ಲಾಸೆನ್ ವೈಟ್ ಬಾಲ್ ಕ್ರಿಕೆಟ್‌ಗೆ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ಟೆಸ್ಟ್‌ಗೆ ನಿವೃತ್ತಿ ಹೇಳಿದ್ದಾರೆ.
೨೦೧೯ ರಿಂದ ೨೦೨೩ ವರೆಗೆ ದಕ್ಷಿಣ ಆಫ್ರಿಕಾ ಪರವಾಗಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಕ್ಲಾಸಿನ್ ಕೊನೆಯದಾಗಿ ವೆಸ್ಟ್ ಇಂಡೀಸ್ ವಿರುದ್ಧ ರೆಡ್ ಬಾಲ್‌ನಲ್ಲಿ ಕಣಕ್ಕಿಳಿದಿದ್ದರು. ಎರಡು ಪಂದ್ಯಗಳಿಂದ ನಾಲ್ಕು ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡದ್ದ ಅವರು ಕೇವಲ ೫೬ ರನ್ ಗಳಿಸಿದ್ದರು. ಇತ್ತೀಚೆಗೆ ಹರಿಣ ಪಡೆಯ ಆರಂಭಿಕ ಆಟಗಾರ ಡೀನ್ ಎಲ್ಗರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಕೆಲವೇ ದಿನಗಳ ಬಳಿಕ ಕ್ಲಾಸೆನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಕಳಪೆ ಫಾರ್ಮನಿಂದಾಗಿ ಕ್ಲಾಸೆನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟು ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೈಲ್ ವೆರ್ರೇಯ್ನ್ ಅವರಿಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಸರಣಿಗೆ ಕ್ಲಾಸೆನ್ ಅವರನ್ನು ಪರಿಗಣಿಸಲಾಗುವುದು ಎಂದು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಹೇಳಿಕೊಂಡಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಕ್ಲಾಸೆನ್ ಹಠಾತ್ ನಿವೃತ್ತಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.
“ಹಲವು ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದ ಬಳಿಕ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿದ್ದೇನೆ. ಇದೊಂದು ಅತ್ಯಂತ ಕಠಿಣ ನಿರ್ಧಾರ ಆಗಿತ್ತು. ಏಕೆಂದರೆ ರೆಡ್ ಬಾಲ್ ಕ್ರಿಕೆಟ್ ನನ್ನ ಅಚ್ಚುಮೆಚ್ಚಿನ ಆಟ. ಇದೊಂದು ಅದ್ಭುತ ಪಯಣ, ಇದರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿರುವುದಕ್ಕೆ ಬಹಳ ಹೆಮ್ಮೆಯಿದೆ. ನನ್ನ ಬ್ಯಾಗಿ ಟೆಸ್ಟ್ ಕ್ಯಾಪ್ ಬಹಳಾ ವಿಶೇಷವಾದುದ್ದು,” ಎಂದು ಹೆನ್ರಿಚ್ ಕ್ಲಾಸೆನ್ ನಿವೃತ್ತಿಯಾಗುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ.





