Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಡಿಕೆಶಿಗೆ ಚೆಕ್‌ಮೇಟ್ ನೀಡಲು ರೂಪುರೇಷೆ?

ಆರ್‌.ಟಿ ವಿಠ್ಠಲಮೂರ್ತಿ

ಕಳೆದ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಯಿತು. ಅಂದ ಹಾಗೆ ಈ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉಪಸ್ಥಿತರಿದ್ದರು.

ಹೀಗೆ ಅವರು ಸಭೆ ಸೇರಿದ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ನಾನಾ ಬಗೆಯ ಚರ್ಚೆಗಳಿಗೆ ಕಾರಣವಾಗಿದ್ದು ಸಹಜವೇ. ಗಮನಿಸಬೇಕಾದ ಸಂಗತಿ ಎಂದರೆ ಈ ಸಭೆಯ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳು ನಡೆದವು. ಈ ಪೈಕಿ ಮುಖ್ಯವಾದುದು ಎಂದರೆ, ಲೋಕಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಇನ್ನೂ ಮೂವರು ಉಪಮುಖ್ಯಮಂತ್ರಿಗಳು ಇರಬೇಕು ಎಂಬ ಬಗ್ಗೆ ಸಭೆ ಚರ್ಚಿಸಿತು ಎಂಬುದು.

ಹಾಗೆ ನೋಡಿದರೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎಂಬ ಬಗೆಗಿನ ಚರ್ಚೆ ಹೊಸತೇನಲ್ಲ. ವಸ್ತುಸ್ಥಿತಿ ಎಂದರೆ ಸರ್ಕಾರ ಬಂದ ಶುರುವಿನಲ್ಲಿ ಸ್ಥತಃ ಸಿದ್ದರಾಜ ಸಿದ್ದರಾಮಯ್ಯ ಅವರೇ ಸಂಪುಟದಲ್ಲಿ ನಾಲ್ಕು ಮಂದಿ ಉಪಮುಖ್ಯಮಂತ್ರಿಗಳು ಇರಲಿ ಎಂದು ಬಯಸಿದ್ದರು. ಕಾರಣ ಸರ್ಕಾರದ ನೇತೃತ್ವವನ್ನು ಹಿಂದುಳಿದ ವರ್ಗದಿಂದ ಬಂದ ತಾವು ವಹಿಸಿಕೊಂಡಿರುವಾಗ ಒಕ್ಕಲಿಗ, ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಉಪಮುಖ್ಯಮಂತ್ರಿ ಹುದ್ದೆಗಳಿಗೆ ನೇಮಕಗೊಂಡರೆ ಸರ್ಕಾರಕ್ಕೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ ಅಷ್ಟೇ ಅಲ್ಲ, ಇಂತಹ ನೇಮಕಾತಿ ದೂರಗಾಮಿ ನೆಲೆಯಲ್ಲಿ ಸರ್ಕಾರಕ್ಕೆ ಭಿನ್ನಮತದ ಕಾವು ತಗಲದಂತೆ ನೋಡಿಕೊಳ್ಳುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಮುಖ್ಯಮಂತ್ರಿ ಹುದ್ದೆಗಾಗಿ ಅವರ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾ‌ರ್ ನಡುವೆ ನಡೆದ ಜಗ್ಗಾಟ ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕಾತಿಗೆ ತಡೆಯೊಡ್ಡಿತು.

ಏಕೆಂದರೆ ಮುಖ್ಯಮಂತ್ರಿ ಹುದ್ದೆ ಸಿದ್ದರಾಮಯ್ಯ ಅವರಿಗೆ ಎಂಬುದು ಖಚಿತವಾದಾಗ, ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತರಾಗಬೇಕಾದ ಡಿ. ಕೆ.ಶಿವಕುಮಾರ್ ತಮಗೆ ಸರಿಸಮನಾಗಿ ಇನ್ನಷ್ಟು ಮಂದಿ ನಾಯಕರು ಬಂದು ಕೂರುವುದನ್ನು ಬಯಸಲಿಲ್ಲ. ಮುಖ್ಯಮಂತ್ರಿಯಾಗಬೇಕಾದ ನಾನು ವರಿಷ್ಠರು ಹೇಳಿದರು ಎಂಬ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ನನ್ನ ಜತೆಗೆ ಇನ್ನೂ ಮೂರು ಮಂದಿ ಉಪಮುಖ್ಯಮಂತ್ರಿಗಳಾದರೆ ನನಗೂ ಅವರಿಗೂ ಏನೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಹಾಗೆ ನೋಡಿದರೆ ಕೆಪಿಸಿಸಿ ಅಧ್ಯಕ್ಷನಾಗಿ ಕರ್ನಾಟಕದಲ್ಲಿ ಪಕ್ಷ ಕಟ್ಟಿದವನು ನಾನು, ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಅಗತ್ಯವಾದ ನೆರವನ್ನು ಒದಗಿಸಿದವನು ನಾನು. ಆದರೆ ನನ್ನ ಜತೆಗೆ ಇನ್ನೂ ಮೂವರು ಬಂದು ಕುಳಿತರೆ ನನ್ನ ಸೇವೆಗೂ, ಅವರ ಸೇವೆಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಇದು ಸರಿಯಲ್ಲ ಎಂಬುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿತ್ತು.

ಡಿ.ಕೆ.ಶಿವಕುಮಾರ್ ಅವರ ವಾದವನ್ನು ಹೈಕಮಾಂಡ್ ಕೂಡ ಮೌನವಾಗಿ ಒಪ್ಪಿಕೊಂಡಿತು. ಏಕೆಂದರೆ ಕಾರಣ ಸ್ಪಷ್ಟವಾಗಿತ್ತು. ಪಕ್ಷ ಅಧಿಕಾರಕ್ಕೆ ಬರಲು ಡಿಕೆಶಿ ಸಲ್ಲಿಸಿದ ಸೇವೆಗೆ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆಯವರನ್ನು ಹೋಲಿಸಲು ಸಾಧ್ಯವಿರಲಿಲ್ಲ. ಪರಿಣಾಮ ಸಿದ್ದರಾಮಯ್ಯ ಅವರು ಬಯಸಿದಂತೆ ನಾಲ್ಕು ಮಂದಿ ಉಪಮುಖ್ಯಮಂತ್ರಿಗಳ ನೇಮಕಾತಿ ಆಗಲಿಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್ ಅವರೊಬ್ಬರು ಮಾತ್ರ

ಉಪಮುಖ್ಯಮಂತ್ರಿ ಹುದ್ದೆಗೇರಿದರು. ಆದರೆ ಹೀಗೆ ಅವರು ಉಪಮುಖ್ಯಮಂತ್ರಿಯಾದ ಫಳಿಗೆಯಿಂದ ಸರ್ಕಾರದಲ್ಲಿ ಅವರನ್ನು ವಿರೋಧಿಸುವ ಶಕ್ತಿಗಳು ಹೆಚ್ಚಾಗುತ್ತಿವೆ. ಆಡಳಿತದಲ್ಲಿ

ಡಿಕೆಶಿಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂಬುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಬಂದು ಕೆಲ ದಿನಗಳಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವರ ಸಂಪುಟದ ಹಲವು ಸಚಿವರು, ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎನ್ನತೊಡಗಿದರು.

ಇದಕ್ಕೆ ಹಲವರ ಬೆಂಬಲವೂ ಇತ್ತು, ವಸ್ತುಸ್ಥಿತಿ ಎಂದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕಾಲಕ್ಕೆ ತಾವು ಉಪಮುಖ್ಯಮಂತ್ರಿಗಳಾಗುವುದು ನಿಶ್ಚಿತ ಅಂತ ಜಿ.ಪರಮೇಶ್ವರ್,

ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಖಾನ್ ಅವರಂತಹ ನಾಯಕರು ಭಾವಿಸಿದ್ದರು. ಆದರೆ ಯಾವಾಗ ಈ ನಿರೀಕ್ಷೆ ಈಡೇರಲಿಲ್ಲವೋ ಆಗ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಕೂಡ ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕಾತಿಯ ಬಗ್ಗೆ ಒಂದು ಕೂಗು ಜಾಗೃತವಾಗಿರುವಂತೆ ನೋಡಿಕೊಂಡರು. ಈ ಕೂಗು ಈಗಲೂ ಜಾಗೃತವಾಗಿರುವುದು ನಿಜ ಮತ್ತು ಸಿದ್ದರಾಮಯ್ಯ ಅವರ ಸಂಪುಟದ ಹಲವು ಸಚಿವರು ಈ ಬಗ್ಗೆ ಧ್ವನಿಯೆತ್ತುತ್ತಿರುವುದೂ ನಿಜ. ಆದರೆ ಇದಕ್ಕೆ ಮತ್ತೊಂದು ಮುಖವೂ ಇದೆ. ಆದೆಂದರೆ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿಯುವುದು ನಿಶ್ಚಿತವಾದರೆ ಅವರ ಜಾಗಕ್ಕೆ ಡಿ.ಕೆ.ಶಿವಕುಮಾರ್ ಅವರು ಬರಕೂಡದು ಎಂಬುದು.

ಕಾರಣ ಈಗಲೇ ಸರ್ಕಾರದ ಮಟ್ಟದಲ್ಲಿ ಹಲವು ವರ್ಗಾವಣೆಗಳು, ವ್ಯವಹಾರಗಳಿಗೆ ಸಂಬಂಧಿಸಿದಂತೆ ತಮ್ಮ ಮಾತೇ ನಡೆಯಬೇಕು ಅಂತ ಡಿಕೆಶಿ ಬಯಸುತ್ತಾರೆ. ಆದರೆ ಅವರ ಈ ಧೋರಣೆ ಬಹುತೇಕ ಸಚಿವರಿಗೆ ಹಿಡಿಸುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಅಧಿಕಾರ ಹಂಚಿಕೆಯ ಮಾತು ಆಗಿದ್ದೇ ನಿಜವಾದರೆ ಸಿದ್ದರಾಮಯ್ಯ ಅವರ ನಂತರ ಬಂದು ಕೂರಬೇಕಾದವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಹೊರತು  ಬೇರೊಬ್ಬರಲ್ಲ ಎಂಬುದು ಅವರ ಯೋಚನೆ. ವಸ್ತುಸ್ಥಿತಿ ಎಂದರೆ, ಇಂತಹ ಯೋಚನೆಯನ್ನು ಕಾರ್ಯಗತಗೊಳಿಸಲು ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೆ.ಎನ್.ರಾಜಣ್ಣ ಅವರಂತಹ ನಾಯಕರು ರಹಸ್ಯ ಸಭೆ ನಡೆಸತೊಡಗಿದ್ದಾರೆ.

ಸದ್ಯಕ್ಕಿರುವ ಮಾಹಿತಿಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಅವಧಿಗೆ ಹಂಚಿಕೆ ಮಾಡಲು ಹೈಕಮಾಂಡ್ ನಿರ್ಧರಿಸಿಲ್ಲ. ಹಾಗಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಹೇಳಿದ್ದಾರೆ. ಆದರೆ ವೇಣುಗೋಪಾಲ್ ಹೀಗೆ ಹೇಳಿದ್ದಾರೆ ಎಂದ ಮಾತ್ರಕ್ಕೆ ನಾಳೆ ಆಟ ಬದಲಾಗಬಾರದು ಎಂದೇನಿಲ್ಲ. ಹೀಗಾಗಿಯೇ ಯಾವುದಕ್ಕೂ ಇರಲಿ ಅಂತ ಸಿದ್ದರಾಮಯ್ಯ ಅವರ ಬೆಂಬಲಿಗರು ಡಾ.ಜಿ.ಪರಮೇಶ್ವರ್ ಅವರ ಹೆಸರನ್ನು ಪರ್ಯಾಯ ನಾಯಕನ ಸ್ಥಾನಕ್ಕೆ ತೇಲಿ ಬಿಟ್ಟಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರೇ ಐದೂ ವರ್ಷ ಮುಖ್ಯಮಂತ್ರಿಯಾಗಿದ್ದರೆ ಫೈನ್. ಆದರೆ ಅವರೇನಾದರೂ ಇಳಿಯುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರೆ ತಕ್ಷಣವೇಪರ್ಯಾಯ ನಾಯಕ ಸಿಎಂ ಹುದ್ದೆಯ ರೇಸಿನಲ್ಲಿರುವಂತಾಗಬೇಕು ಎಂಬುದು ಸಿದ್ದರಾಮಯ್ಯ ಬೆಂಬಲಿಗರ ಲೆಕ್ಕಾಚಾರ.

ಕಳೆದ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಚಿವರ ಸಭೆ, ಈ ವಿಷಯವಾಗಿಯೇ ಚರ್ಚಿಸಿದೆ ಮತ್ತು ಸಿದ್ದರಾಮಯ್ಯ ಬದಲಾಗುವುದೇ ಆದರೆ ಆ ಜಾಗಕ್ಕೆ ಡಿ.ಕೆ. ಶಿವಕುಮಾರ್ ಅವರು ಬಂದು ಕೂರುವುದನ್ನು ಹೇಗೆ ತಡೆಗಟ್ಟಬೇಕು ಎಂಬ ರೂಪು ರೇಷೆಯನ್ನು ಸಿದ್ದಗೊಳಿಸಿದೆ.

ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಚಿವರ ಸಭೆ ರಾಜಕೀಯ ವಲಯಗಳನ್ನು ಕುತೂಹಲಕ್ಕೆ ದೂಡಿದ್ದು ಮಾತ್ರ ನಿಜ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ