ಬೆಂಗಳೂರು: ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡಬೇಕೆಂದು ಹಿಂದುಳಿದ ಸಮುದಾಯಗಳ ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ.
ಶ್ರಮಿಕ ವರ್ಗದವರಿಗೆ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಯಿಂದ ಹೆಚ್ಚು ಉಪಯೋಗವಾಗುತ್ತಿದೆ ಎಂದು ಕಾಂಗ್ರೆಸ್ ಗ್ಯಾರೆಂಟಿಗಳನ್ನು ಶ್ಲಾಘಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಮಠಗಳಿಗೆ ಜಮೀನು ನೀಡುವ ಕುರಿತು ಸ್ವಾಮೀಜಿಗಳು ಪ್ರಸ್ತಾಪಿಸಿದರು. ಸಿಎಂ ಈ ಬಗಗೆ ತಹಶೀಲ್ದಾರರಿಗೆ ಹಾಗೂ ದೂರವಾಣಿ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಶೀಘ್ರ ವರದಿ ನೀಡುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ವರದಿ ನೀಡಲು ಎರಡು ತಿಂಗಳುಗಳ ಕಾಲ ಅವಧಿ ವಿಸ್ತರಣೆಯಾಗಿದೆ. ಕಾಂತರಾಜು ವರದಿಯನ್ನು ನೀಡಲು ಜಯಪ್ರಕಾಶ್ ಹೆಗ್ಡೆಯವರು ನಿರಾಕರಿಸಿದ್ದಾರೆ. ಜಾತಿ ಗಣತಿ ವರದಿ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲಾಗುವುದು ಎಂದು ಹೇಳಿದರು.
ಭೋವಿ ಸಮುದಾಯ ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಹಾಗೂ ಹಿಂದುಳಿದ ಜಾತಿಗಳ ಮಠಗಳ ಸ್ವಾಮೀಜಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ. ದಯಾನಂದ ಇತರರು ಹಾಜರಿದ್ದರು.