ಲಾಸ್ ಏಂಜಲೀಸ್: ಕೆರಿಬಿಯನ್ ಸಮುದ್ರ ದ್ವೀಪದಲ್ಲಿ ಶುಕ್ರವಾರ ಪತನಗೊಂಡ ವಿಮಾಣದಲ್ಲಿ ಜರ್ಮನ್ ಮೂಲದ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತವರ ಇಬ್ಬರು ಪುತ್ರಿಯರು ಮತ್ತು ಪೈಲೆಟ್ ಸೇರಿದಂತೆ ಒಟ್ಟು ನಾಲ್ಕು ಜನರು ಮರಣ ಹೊಂದಿದ್ದಾರೆ.
ಕೆರೆಬಿಯನ್ ದ್ವೀಪ ಪ್ರದೇಶವಾದ ಬೆಕ್ವಿಯಾದಿಂದ ಸಣ್ಣ ವಿಮಾನದಲ್ಲಿ ಮಕ್ಕಳೊಡನೆ ಆಲಿವರ್ ಪ್ರಯಾಣಿಸುತ್ತಿದ್ದು, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ದ್ವೀಪ ಪ್ರದೇಶದ ಸಮುದ್ರದಲ್ಲಿ ವಿಮಾನ ಪತನವಾಗಿದೆ.
ಸ್ಥಳಕ್ಕೆ ಕೋಸ್ಟ್ ಗಾರ್ಡ್, ನೌಕಾದಳ ಧಾವಿಸಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ, ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸೇಂಟ್ ವಿನ್ಸೆಂಟ್ ಪೊಲೀಸರು ತಿಳಿಸಿದ್ದಾರೆ.
ಜರ್ಮನಿ ಮೂಲದ ನಟ ಆಲಿವರ್ ಅವರು ಹಾಲಿವುಡ್‌ನ ‘ಸ್ಪೀಡ್ ರೇಸರ್’, ‘ದಿ ಗುಡ್ ಜರ್ಮನ್’, ‘ಜಿಪ್ಪರ್’, ‘ಇಂಡಿಯಾನ ಜೋನಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಸೇವ್ ಬೈ ದಿ ಬೆಲ್’, ‘ದಿ ನ್ಯೂ ಕ್ಲಾಸ್’ ಎಂಬ ಟೆಲಿವಿಷನ್ ಸಿರೀಸ್‌ಗಳಲ್ಲಿಯೂ ಅವರು ಅಭಿನಯಿಸಿದ್ದು, 35ಕ್ಕೂ ಹೆಚ್ಚು ಸಿನಿಮಾ, ಟಿವಿ ಸಿರೀಸ್‌ಗಳಿಗೆ ಅವರು ಬಣ್ಣ ಹಚ್ಚಿದ್ದರು.