ಬೆಂಗಳೂರು: ರಾಮಮಂದಿರ ಉದ್ಘಾಟನೆ ವೇಳೆ ಬಿಜೆಪಿ ಗೋಧ್ರಾ ಹತ್ಯಾಕಾಂಡದ ರೀತಿ ಮಾಡಲು ಪ್ಲ್ಯಾನ್ ಮಾಡಿದೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿಕೆಗೆ ಪಕ್ಷದಿಂದ ಯಾವುದೇ ನೋಟಿಸ್ ಕೊಡಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಹೇಳಿಕೆ ಬಗ್ಗೆ ಗೃಹ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಅಂತಹ ಮಾಹಿತಿ ಬಂದರೆ, ಅದನ್ನ ನಿರ್ವಹಿಸಲು ನಮ್ಮ ಇಲಾಖೆ ಸಮರ್ಥವಾಗಿದೆ. ಅಂತಹ ಘಟನೆಗಳು ಆಗಲು ನಾವು ಬಿಡುವುದಿಲ್ಲ. ಸಂದರ್ಭ ಬಂದರೆ ಹರಿಪ್ರಸಾದ್ ಅವರನ್ನ ಕರೆದು ಬೇಕಾದರೆ ಕೇಳೋಣ ಎಂದರು.
ನಮ್ಮ ಇಲಾಖೆಗೆ ಇದನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಗೊತ್ತಿದೆ. ಹರಿಪ್ರಸಾದ್ ಹಿರಿಯ ನಾಯಕರು. ಅವರು ಹೇಳಬೇಕಿದ್ರೆ ಅವರ ಬಳಿ ಮಾಹಿತಿ ಇರಬೇಕು. ಹರಿಪ್ರಸಾದ್‌ಗೆ ನೋಟಿಸ್ ಕೊಟ್ಟು ಕರೆಯೋ ಅವಶ್ಯಕತೆ ಇಲ್ಲ. ಹೇಳಿಕೆ ಕೊಟ್ಟವರಿಗೆಲ್ಲಾ ನೋಟಿಸ್ ಕೊಡೋಕೆ ಹೋದ್ರೆ ಎಷ್ಟು ಜನರಿಗೆ ನೋಟಿಸ್ ಕೊಡಬೇಕಾಗುತ್ತೆ ಎಂದು ತಿಳಿಸಿದರು.