ಕೆಲ ದಿನಗಳ ಹಿಂದೆ ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್‌ನ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ರಾಮಮಂದಿರದ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಇ ಮೇಲ್ ಒಂದು ಬಂದಿತ್ತು. ರಾಮಮಂದಿರದ ಮೇಲೆ ಬಾಂಬ್ ದಾಳಿ ಮಾಡುವುದು ಮಾತ್ರವಲ್ಲದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್‌ರನ್ನು ಸ್ಪೋಟಿಸಿ ಹತ್ಯೆ ಮಾಡುವುದಾಗಿಯೂ ಸಹ ಈ ಮೇಲ್‌ನಲ್ಲಿ ಬರೆಯಲಾಗಿತ್ತು.
ತಾನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಹೀಗೆ ಬೆದರಿಕೆ ಇಮೇಲ್ ಬಂದ ಕೂಡಲೇ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿದ್ದವು. ಎಸ್‌ಟಿಎಫ್ ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಎಸ್‌ಟಿಎಫ್ ಪ್ರಕಾರ ಇಮೇಲ್ ಸ್ವೀಕರಿಸಿದ ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್‌ನ ಅಧ್ಯಕ್ಷ ದೇವೇಂದ್ರ ತಿವಾರಿಯೇ ಈ ಕೃತ್ಯದ ಸಂಚು ರೂಪಿಸಿದ್ದರು ಎನ್ನಲಾಗಿದೆ. ಭದ್ರತೆ ಪಡೆದು ದೊಡ್ಡ ನಾಯಕರಾಗುವ ಕಾರಣಕ್ಕಾಗಿ ದೇವೇಂದ್ರ ತಿವಾರಿ ಈ ರೀತಿ ಸಂಚು ರೂಪಿಸಿದ್ದಾರೆ ಎನ್ನಲಾಗಿದ್ದು, ತಲೆ ಮರೆಸಿಕೊಂಡಿರುವ ದೇವೇಂದ್ರಗಾಗಿ ತೀವ್ರ ಹುಟುಕಾಟ ಶುರುವಾಗಿದೆ. ಇನ್ನು ಬಂಧಿತ ಆರೋಪಿಗಳಾದ ತಹರ್ ಸಿಂಗ್ ಹಾಗೂ ಓಂ ಪ್ರಕಾಶ್ ಮಿಶ್ರಾ ಈ ಇಬ್ಬರೂ ಸಹ ದೇವೇಂದ್ರ ತಿವಾರಿ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳೇ ಆಗಿದ್ದಾರೆ.