ಬೆಂಗಳೂರು: ರಾಮಮಂದಿರ ಉದ್ಘಾಟನೆ ದಿನ ರಜೆ ಘೋಷಣೆ ಮಾಡುವಂತೆ ಸರಕಾರಕ್ಕೆ ಬಿಜೆಪಿ ಒತ್ತಾಯ ಮಾಡಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ.ಹೀಗಾಗಿ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡಲಿ. ನಾವು ಯಾಕೆ ರಜೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಯಾರಿಗೆಲ್ಲ ಆಹ್ವಾನ ಬಂದಿದೆ ಗೊತ್ತಿಲ್ಲ. ಆಹ್ವಾನ ಬಂದವರು ಹೋಗಲಿ ಎಂದರು.
ರಾಮ ಜನ್ಮಭೂಮಿ ಕರಸೇವೆಗೂ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ವಿಚಾರದ ಕುರಿತು ಮಾತನಾಡಿದ ಅವರು, ಹಳೇ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡುವಂತೆ ಸೂಚಿಸಿದ್ದೇವೆ.
1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತಿದೆ. ಅದು ಎಷ್ಟೇ ವರ್ಷ ಆಗಲಿ, ತಪ್ಪಿತಸ್ಥರನ್ನು ಸುಮ್ಮನೆ ಬಿಡಬೇಕಾ? ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ.
ಹೈಕೋರ್ಟ್ ನಿರ್ದೇಶನದಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.