Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕಮಲ ಪಾಳೆಯವನ್ನು ತಲ್ಲಣಗೊಳಿಸಿದ ಯತ್ನಾಳ್ ಆರೋಪ

ಕಳೆದ ವಾರ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಒಂದು ಆರೋಪ ಕಮಲ ಪಾಳೆಯವನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದಂತೆಯೂ ಕಾಣಿಸಿತು.

ಅಂದ ಹಾಗೆ ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಮುಗಿಬೀಳುತ್ತಲೇ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?

ಒಂದು ವೇಳೆ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವ ಕೆಲಸವಾದರೆ ಈ ಹಿಂದೆ ನಡೆದ ನಲವತ್ತು ಸಾವಿರ ಕೋಟಿ ರೂಪಾಯಿಗಳ ಹಗರಣವೊಂದನ್ನು ಬಹಿರಂಗಪಡಿಸುತ್ತೇನೆ ಎಂಬುದು ಅವರ ಮಾತು. ಯಾವಾಗ ಯತ್ನಾಳ್ ಇಂತಹ ಮಾತುಗಳನ್ನಾಡಿದರೋ ಸಹಜವಾಗಿಯೇ ರಾಜ್ಯದ ಬಿಜೆಪಿ ಪಾಳೆಯದಲ್ಲಿ ಒಂದು ಬಗೆಯ ತಲ್ಲಣ ಆರಂಭವಾಯಿತು. ತಲ್ಲಣ ಏಕೆಂದರೆ ಈ ಹಗರಣ ನಲವತ್ತು ಸಾವಿರ ಕೋಟಿ ರೂಪಾಯಿ ಗಾತ್ರದ್ದು ಎಂಬುದಷ್ಟೇ ಅಲ್ಲ, ಬದಲಿಗೆ ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ತಿರುಗಿ ಬೀಳುತ್ತಿರುವ ಯತ್ನಾಳ್ ಅವರು ಇಂತಹ ಒಂದಿಲ್ಲೊಂದು ಆರೋಪವನ್ನು ಪದೇ ಪದೇ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಏಕಾಗುತ್ತಿಲ್ಲ? ಎಂಬ ಕಾರಣಕ್ಕಾಗಿ ಶುರುವಾಯಿತು.

ಹಾಗೆ ನೋಡಿದರೆ 2019ರಲ್ಲಿ ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಯಾವಾಗ ಅಧಿಕಾರ ಹಿಡಿಯಿತೋ ಆ ಸಂದರ್ಭದಲ್ಲಿ ಯತ್ನಾಳ್ ಅವರು ಯಡಿಯೂರಪ್ಪ ಅವರ ಪರವಾಗಿಯೇ ಇದ್ದರು.

ಒಂದು ಸಂದರ್ಭದಲ್ಲಂತೂ, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿದೆ. ಹಾಗೊಂದು ವೇಳೆ ಅದು ಇಂತಹ ಕೆಲಸಕ್ಕೆ ಕೈ ಹಾಕಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಇದೇ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದರು. ಅಂತಹವರು ಇದ್ದಕ್ಕಿದ್ದಂತೆ ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬಿದ್ದರು. ಕಾಲ ಕ್ರಮೇಣ ಅವರ ಯಡಿಯೂರಪ್ಪ ವಿರೋಧಿ ಧೋರಣೆ ಯಾವ ಲೆವೆಲ್ಲಿಗೆ ತಲುಪಿತು ಎಂದರೆ, ಯಡಿಯೂರಪ್ಪ ಅವರು ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ ಎಂಬುದರಿಂದ ಹಿಡಿದು ಹತ್ತು ಹಲವು ಆರೋಪಗಳನ್ನು ಅವರು
ಮಾಡತೊಡಗಿದರು.

ಇವತ್ತು ಅವರು ನಲವತ್ತು ಸಾವಿರ ಕೋಟಿ ರೂಪಾಯಿಗಳ ಹಗರಣ ಅಂತ ಏನು ಹೇಳಿದ್ದಾರೆ ಇದು ಸಹಜವಾಗಿಯೇ ಬಿಜೆಪಿ ಪಾಳೆಯದಲ್ಲಿ ದಿನ ಕಳೆದಂತೆ ಪಕ್ಷಕ್ಕೆ ಡ್ಯಾಮೇಜು ಮಾಡುತ್ತಿರುವ ಯತ್ನಾಳರನ್ನು ಯಾವ ಶಕ್ತಿ ಸಹಿಸಿಕೊಳ್ಳುತ್ತಿದೆ? ಎಂದು ಚಿಂತಿಸುವ ಮಟ್ಟಕ್ಕೆ ಹೋಗಿದೆ. ಸಹಜವಾಗಿಯೇ ಅವರ ಈ ಆರೋಪ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ನಿಜ. ಕಾರಣ ಮುಂದಿನ ಪಾರ್ಲಿಮೆಂಟ್ ಚುನಾವಣೆಯನ್ನು ಎದುರಿಸಲು ಅಣಿಯಾಗುತ್ತಿರುವ ಅದಕ್ಕೆ ಯತ್ನಾಳ್ ಅವರ ಆರೋಪ ಒಂದು ಬ್ರಹ್ಮಾಸ್ತ್ರವಿದ್ದಂತೆ.

ಏಕೆಂದರೆ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿರುವ ಬಿಜೆಪಿಯ ನಾಯಕರು, ಸರ್ಕಾರದ ವಿರುದ್ಧ ದಾಳಿಗಿಳಿಯಲು ಸಜ್ಜಾಗುತ್ತಿರುವ ಕಾಲದಲ್ಲಿ ಯತ್ನಾಳ್ ಅವರು ಕೊಟ್ಟಿರುವ ಈ ಅಸ್ತ್ರದಿಂದ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಪ್ರತಿದಾಳಿ ಮಾಡಬಹುದು. ನಿಮ್ಮ ಎಲೆಯಲ್ಲಿ ನಲವತ್ತು ಸಾವಿರ ಕೋಟಿ ರೂ. ಹಗರಣ ಹೆಣವಾಗಿ ಮಲಗಿದೆ. ಹೀಗಿರುವಾಗ ನಮ್ಮ ಎಲೆಯಲ್ಲಿ ಏನು ಬಿದ್ದಿದೆ ಅಂತ ಏಕೆ ಹುಡುಕುತ್ತೀರಿ? ಎಂದು ಕಾಂಗ್ರೆಸ್ ನಾಯಕರು ಈಗ ಬಿಜೆಪಿಯನ್ನು ನಿರಾಯಾಸವಾಗಿ ಪ್ರಶ್ನಿಸಬಹುದು.

ಅಂದ ಹಾಗೆ ಇದೂ ಅಂತಲ್ಲ, ಹೀಗಾಗಿ ಪ್ರತಿಪಕ್ಷಗಳ ಸಾಲಿನಲ್ಲಿ ಯಾರೇ ಬಂದು ಕೂರಲಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಿದ್ದರು.

ಆದರೆ ಇವತ್ತು ವಿರೋಧ ಪಕ್ಷದ ಸಾಲಿಗೆ ಬಿಜೆಪಿ ಬಂದು ಕುಳಿತಿದೆ. ಆದರೆ ಅದು ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಸಂಘಟಿಸುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಇವರೇನೇ ಆರೋಪ ಮಾಡಿದರೂ, ಸಿದ್ದ ರಾಮಯ್ಯ ಅವರ ಸರ್ಕಾರ ಈ ಹಿಂದೆ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರದ ಲೋಪ ದೋಷಗಳ ಕುರಿತು ತಿರುಗೇಟು ನೀಡುತ್ತದೆ. ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡಿದರೆ, ಈ ಹಿಂದೆ ನೀವು ಅಧಿಕಾರ ದಲ್ಲಿದ್ದಾಗ ಬಜೆಟ್ ನಿಯಮವನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಹಣವನ್ನು ವಿವಿಧ ಯೋಜನೆಗಳಿಗೆ ಕೊಟ್ಟಿದ್ದೀರಿ. ಹೀಗಾಗಿ ಆ ಯೋಜನೆಗಳಿಗೆ ನಾವು ಹಣ ಕೊಡಬೇಕು ಎಂದು ಸಿದ್ದರಾಮಯ್ಯ ಸರ್ಕಾರ ತಿರುಗೇಟು ಹೊಡೆಯುತ್ತದೆ. ನಿಮ್ಮದು ಭ್ರಷ್ಟ ಸರ್ಕಾರ ಎಂದು ಬಿಜೆಪಿ ನಾಯಕರು ಹೇಳಿದರು ಎಂದಿಟ್ಟುಕೊಳ್ಳಿ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳ ವಿವರ ಬಹಿರಂಗಪಡಿಸಲು ಕಾಂಗ್ರೆಸ್ ತರಾತುರಿ ತೋರಿಸುತ್ತದೆ.

ಹೀಗಾಗಿ ಇವತ್ತು ವಿಪಕ್ಷದ ಸಾಲಿನಲ್ಲಿ ಕುಳಿತ ಬಿಜೆಪಿ ನಾಯಕರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವೇ ಆಗುತ್ತಿಲ್ಲ. ಒಂದೇ ಒಂದು ಭ್ರಷ್ಟಾಚಾರದ ಪ್ರಕರಣವನ್ನು ಎತ್ತಿ ಹಿಡಿದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಅದಕ್ಕೆ ಸಾಧ್ಯವಾಗಿಲ್ಲ. ಹೀಗೆ ಒಂದು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು, ನೈತಿಕವಾಗಿ ಅದರ ಧೈರ್ಯವನ್ನು ಕುಗ್ಗಿಸಲು ಯಾವಾಗ ಪ್ರತಿಪಕ್ಷ ವಿಫಲವಾಗುತ್ತದೋ ಆಗ ಸಹಜವಾಗಿಯೇ ಅದು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಹೀಗೆ ಆತ್ಮವಿಶ್ವಾಸ ಕಳೆದುಕೊಳ್ಳುವ ವಿರೋಧ ಪಕ್ಷ ಸರ್ಕಾರವನ್ನು ಎಚ್ಚರಿಸುವ, ಆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುವ ಕೆಲಸ ಮಾಡಲು ಸಾಧ್ಯವಿಲ್ಲ. ಇವತ್ತು ಬಿಜೆಪಿಯ ಪರಿಸ್ಥಿತಿ ಹೀಗಾಗಿರುವುದು ಸಹಜವಾಗಿಯೇ ಸಿದ್ದರಾಮಯ್ಯ ಸರ್ಕಾರಕ್ಕೆ ಹಿತಕರವಾದ ಬೆಳವಣಿಗೆ.

ಹೀಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕತೆ ಹಾಗಿರಲಿ, ಒಂದು ಪಕ್ಷವಾಗಿಯೂ ರಾಜ್ಯ ಬಿಜೆಪಿ ಸ್ವಯಂಬಲದಿಂದ ಸಿದ್ದರಾಮಯ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವ ಶಕ್ತಿ ಹೊಂದಿಲ್ಲ. ಕಾರಣ ಇವತ್ತು ಪಕ್ಷದ ಘಟಾನುಘಟಿಗಳು ಅಂತ ಯಾರಿದ್ದಾರೋ ಈ ಪೈಕಿ ಬಹುತೇಕರು ಒಂದಿಲ್ಲೊಂದು ಆರೋಪಗಳನ್ನು ಹೊತ್ತವರು. ಹೀಗೆ ಆರೋಪಗಳ ಮೂಟೆ ಹೊತ್ತವರು, ವಿರೋಧಿಗಳನ್ನು ಮಣಿಸಲು ಹೇಗೆ ಶಕ್ತರಾಗುತ್ತಾರೆ? ಇದು ಸದ್ಯದ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಬಿಜೆಪಿ ನಾಯಕರ ಮೇಲೆ ನಿರಂತರವಾಗಿ ಆರೋಪಗಳ ಸುರಿಮಳೆ ಸುರಿಸುತ್ತಾರೆ.

ಯತ್ನಾಳ್ ಮಾಡಿದ ಆರೋಪವೂ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿ ಬಂದ ಹಗರಣಗಳನ್ನು ಅಸ್ತ್ರವಾಗಿ ರೆಡಿ ಮಾಡಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಅವಕಾಶ ಸಿಕ್ಕಂತೆ ಆಗಿದೆ. ವಾಸ್ತವವಾಗಿ ವಿಧಾನಸಭೆಯ ಇತಿಹಾಸದಲ್ಲಿ ಒಂದು ವಿರೋಧ ಪಕ್ಷಕ್ಕೆ ಇಷ್ಟು ಧರ್ಮಸಂಕಟದ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ. ಅದು ಎಸ್.ಶಿವಪ್ಪ ಅವರಿಂದ ಇತ್ತೀಚಿನ ತನಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ತನಕ ಯಾರೇ ಇರಬಹುದು. ವಿಧಾನಪರಿಷತ್ತಿನಲ್ಲೇ ಇರಬಹುದು. ಯಾರಾರು ಇದುವರೆಗೆ ಪ್ರತಿಪಕ್ಷದ ನಾಯಕರಾಗಿದ್ದಾರೋ ಅವರು ಯಾವತ್ತೂ ಸರ್ಕಾರದ ವಿರುದ್ಧ ಹೋರಾಡಲು ಧರ್ಮಸಂಕಟ ಎದುರಿಸುತ್ತಿರಲಿಲ್ಲ. ಈ ರೀತಿ ಯತ್ನಾಳ್ ಅವರು ಸುರಿಸುತ್ತಿರುವ ಆರೋಪಗಳ ಮಳೆಯಿಂದ ಬಚಾವಾಗಲು ರಾಜ್ಯ ಬಿಜೆಪಿ ನಾಯಕರ ಬಳಿ ಯಾವ ಛತ್ರಿಯೂ ಇರುವಂತೆ ಕಾಣುತ್ತಿಲ್ಲ. ಪರಿಣಾಮ ರಾಜ್ಯ ಬಿಜೆಪಿ ತಾನು ಬಿದ್ದಿರುವ ಹೊಂಡದಿಂದ ಮೇಲೇಳಲು ಇನ್ನಷ್ಟು ಸಮಯ ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿದೆ.

ಇಂತಹ ಪರಿಸ್ಥಿತಿಯಿಂದ ಅದು ಯಾವಾಗ ಬಚಾವಾಗುತ್ತದೋ ಗೊತ್ತಿಲ್ಲ. ಆದರೆ ತಾನು ಬಿದ್ದ ಹೊಂಡದಿಂದ ಮೇಲಕ್ಕೇಳುವ ತನಕ ಅದಕ್ಕೆ ಶಕ್ತಿ ಸಂಚಯವಾಗುವುದಿಲ್ಲ. ಹಾಗಾಗಿ ಇವತ್ತಿನ ತನಕ ಅದರ ಬತ್ತಳಿಕೆಯಲ್ಲಿ ಮೋದಿ ಅಲೆ ಎಂಬ ಅಸ್ತ್ರ ಬಿಟ್ಟರೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಯೋಗಿಸಲು ಮತ್ತೊಂದು ಅಸ್ತ್ರ ಕಾಣುತ್ತಿಲ್ಲ. ಇದೇ ಸದ್ಯದ ವಿಶೇಷ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ