ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ ಎರಡನೇ ಚಿತ್ರ ಕಾಟೇರ ಮೊನ್ನೆಯಷ್ಟೇ ( ಡಿಸೆಂಬರ್ 29 ) ಬಿಡುಗಡೆಗೊಂಡಿದ್ದು ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಪ್ರೇಕ್ಷಕರ ವಿಮರ್ಶೆಯಲ್ಲಿ ಮಾತ್ರವಲ್ಲದೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿಯೂ ಸಹ ಕಾಟೇರ ಅಬ್ಬರ ಜೋರಾಗಿದೆ. ಬಿಡುಗಡೆಯಾದ ದಿನ ಬರೋಬ್ಬರಿ 19.79 ಕೋಟಿ ಗಳಿಕೆ ಮಾಡುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಚಿತ್ರ ಎರಡನೇ ದಿನವೂ ಎರಡಂಕೆ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.

ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ 17.35 ಕೋಟಿ ಗಳಿಕೆ ಮಾಡಿದ ಕಾಟೇರ ಮೊದಲೆರಡು ದಿನಗಳಲ್ಲಿ ಒಟ್ಟು 37.14 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ರಾಕ್‌ಲೈನ್ ಪ್ರೊಡಕ್ಷನ್ಸ್ ಟ್ವೀಟ್ ಮಾಡಿ ಅಧಿಕೃತವಾಗಿ ತಿಳಿಸಿದೆ. ಇನ್ನು ಇಂದು ( ಡಿಸೆಂಬರ್ 31 ) ಭಾನುವಾರ ಹಾಗೂ ನಾಳೆ ಹೊಸ ವರ್ಷದ ಸಂಭ್ರಮದಲ್ಲಿ ಸಿನಿ ರಸಿಕರು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿದ್ದು, ಚಿತ್ರ 60 ಕೋಟಿ ಗಡಿ ದಾಟುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಈ ವರ್ಷ ಪೂರ್ತಿ ಪರ್ಫೆಕ್ಟ್ ಹಿಟ್ ಸಿನಿಮಾವಿಲ್ಲದೇ ಬರ ಎದುರಿಸಿದ್ದ ಕನ್ನಡ ಚಿತ್ರರಂಗದಲ್ಲಿ ಕಾಟೇರ ಭರ್ಜರಿ ಫಸಲು ಬೆಳೆದು ನಂಬರ್ ಒನ್ ಎನಿಸಿಕೊಂಡಿದ್ದಾನೆ.





