Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜನವರಿ 8ರಿಂದ ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟೀಯ ಕ್ರೀಡಾಕೂಟ

ಮೈಸೂರು: ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟ್ರೀಯ ಕ್ರೀಡಾಕೂಟವನ್ನು ಮೈಸೂರಿನಲ್ಲಿ ಜನವರಿ 8 ರಿಂದ 12 ರವರೆಗೆ ಆಯೋಜಿಸಲಾಗುವುದು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕ್ರೀಡಾ ಹಾಗೂ ಯುವಸಬಲೀಕರಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಪ್ರಸಾದ್ ಅವರು ತಿಳಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನವರಿ 7 ರಂದು ಮಾನ್ಯ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಸೇರಿದಂತೆ ರಾಜ್ಯದ ವಿವಿಧ ಸಚಿವರು, ಗಣ್ಯ ವ್ಯಕ್ತಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 4,500 ಕ್ರೀಡಾಪಟುಗಳು, 1500 ಶಾಲಾ ಶಿಕ್ಷಕರು ಸಿಬ್ಬಂದಿಗಳು ಸೇರಿದಂತೆ ಸುಮಾರು 6,000 ಜನ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಏಕಲವ್ಯ ಮಾದರಿ ವಸತಿ ಶಾಲೆಯು ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಗಳಾಗಿದ್ದು, 20 ಕೋಟಿ ವೆಚ್ಚ ಅನುದಾನದಲ್ಲಿ ಸದರಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಈ ಬಾರಿ ಆಯೋಜಿಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಅಂದಾಜು 5 ಕ್ರೀಡಾಂಗಣಗಳಲ್ಲಿ, ಏಕಕಾಲದಲ್ಲಿ ಕ್ರೀಡಾಸ್ಪರ್ಧೆಗಳು ಜರುಗಲಿದ್ದು, ಕ್ರೀಡಾಪಟುಗಳ ಸಂಚಾರಕ್ಕೆ ವಾಹನಗಳನ್ನು ಒದಗಿಸುವ ಕುರಿತು, ಕ್ರೀಡಾಂಗಣಗಳ ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪೋಲಿಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಮೈಸೂರಿಗೆ ಆಗಮಿಸುವ ಕ್ರೀಡಾಪಟುಗಳಿಗೆ ಮೈಸೂರಿನ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ವ್ಯವಸ್ಥೆ ಆಗಬೇಕು. ದೀಪಾಲಂಕಾರ ಹಾಗೂ ಚಾಮುಂಡಿ ಬೆಟ್ಟ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಡಾ. ಜಿತೇಂದ್ರ ಶೆಟ್ಟಿ ಅವರು ಮಾತನಾಡಿ ಕ್ರೀಡಾಕೂಟದಲ್ಲಿ 10 ಗುಂಪು ಕ್ರೀಡಾಸ್ಪರ್ಧೆಗಳನ್ನು ಹಾಗೂ 18 ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕ್ರೀಡೆ ನಡೆಯುವ ಸ್ಥಳ, ಸಮಯ, ಕೆಲಸಗಳಿಗೆ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳ ವಿವರ ಎಲ್ಲವನ್ನು ಮುಂಚಿತವಾಗಿಯೇ ತಲುಪಿಸುವ ವ್ಯವಸ್ಥೆ ಆಗುತ್ತದೆ. ಈಗಾಗಲೇ 3500 ಮಕ್ಕಳಿಗೆ ಇನ್ಸೂರೆನ್ಸ್ ಮಾಡಿಸಲಾಗಿದೆ. ಕ್ರೀಡಾಕೂಟದಲ್ಲಿ ಕೋವಿಡ್ ಸೂಚನೆಗಳನ್ನು ಪಾಲಿಸಲಾಗುವುದು. ಪ್ರತಿಯೊಂದು ರಾಜ್ಯಕ್ಕೂ ನೋಡಲು ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಜನವರಿ 15 ರಂದು ಪ್ರಧಾನಿ ಜೊತೆ ವಿಡಿಯೋ ಸಂವಾದ

ಜನವರಿ 15 ರಂದು ನೈಜ ದುರ್ಬಲ ಬುಡಕಟ್ಟು ಜನಾಂಗದವರ ಜೊತೆ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದ್ದು, ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ನೈಜ ದುರ್ಬಲ ಬುಡಕಟ್ಟು ಜನಾಂಗದ (ಜೇನು ಕುರುಬ ಮತ್ತು ಕೊರಗ) ಜನರ ಜೊತೆ ನೇರ ಸಂಭಾಷಣೆ ನಡೆಸುವರು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಪ್ರಸಾದ್ ಅವರು ತಿಳಿಸಿದರು.

ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಜನಾಂಗದ ಸಂಖ್ಯೆ 20 ಲಕ್ಷ ವಿದ್ದು, ರಾಜ್ಯದಲ್ಲಿ 70 ಸಾವಿರ ಜನಸಂಖ್ಯೆ ಇದೆ. ಆದಿವಾಸಿ ದುರ್ಬಲ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆ ಅಡಿ 24 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದ್ದು, ಸದರಿ ಯೋಜನೆಯು ಆದಿವಾಸಿಗಳ ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಶಾಲೆ, ವಿದ್ಯಾರ್ಥಿ ನಿಲಯ, ಆಸ್ಪತ್ರೆ ನಿರ್ಮಾಣ, ಅಂಗನವಾಡಿ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿದೆ ಎಂದರು.

ಈ ಕುರಿತು ಮಾನ್ಯ ಪ್ರಧಾನ ಮಂತ್ರಿಗಳು ನಡೆಸಲಿರುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ 50 ರಿಂದ 75 ಆದಿವಾಸಿ ಜನರು ಭಾಗವಹಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಪರಿಶಿಷ್ಟ ವರ್ಗಗಳ ಇಲಾಖೆಯ ನಿರ್ದೇಶಕರಾದ ಕಲ್ಲೇಶ್, ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್, ಡಿಸಿಪಿ ಜಾಹ್ನವಿ,ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಆಶಾದ್ ಉರ್ ರೆಹ್ಮಾನ್ ಶರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಯೋಜನಾ ನಿರ್ದೇಶಕರಾದ ಮುನಿರಾಜು ಹಾಗೂ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್. ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ