Mysore
27
haze

Social Media

ಗುರುವಾರ, 01 ಜನವರಿ 2026
Light
Dark

ಹೊಸ ವರ್ಷಾಚರಣೆ: ಮೈಸೂರಲ್ಲಿ ಮಹಿಳೆಯರ ಸುರಕ್ಷತೆಗಾಗಿ 8 ಪಿಂಕ್‌ ಪಡೆ

ಮೈಸೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ 36 ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ 8 ಸುರಕ್ಷತಾ ಪಿಂಕ್‌ ಗರುಡಾ (ಚಾಮುಂಡಿ ಪಡೆ) ಪಡೆಗಳನ್ನು ರಚಿಸಲಾಗಿದೆ ಎಂದ ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌ ಹೇಳಿದ್ದಾರೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 1 ಗಂಟೆ ಒಳಗಾಗಿ ಮುಕ್ತಾಯಗೊಳಿಸಬೇಕು. ಸಾರ್ವಜನಿಕರಿಗೆ ಬಲವಂತವಾಗಿ ಶುಭ ಕೋರಿ ಕಿರಿಕಿರಿ ನೀಡಬಾರದು, ಅಶ್ಲೀಲ, ಅರಬೆತ್ತಲೆ ವರ್ತನೆ, ಮಾದಕ ವಸ್ತು ಸೇವನೆ, ಜೂಜಾಟಗಳನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಪಾಸಣೆಗಾಗಿ ಶ್ವಾನ ದಳ, ವಿಧ್ವಂಸಕ ಕೃತ್ಯ ತಡೆಯಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಡ್ರ್ಯಾಗ್‌ ರೇಸ್‌, ವ್ಹೀಲಿಂಗ್‌ಮ ಕರ್ಕಶ ಶಬ್ದ ತಡೆಯಲು ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಿದ್ದೇವೆ. ಮಾದಕ ವಸ್ತು ಸಾಗಾಟ ಪತ್ತೆಹಚ್ಚಲು ಸಿಸಿಬಿ ತಂಡ ಕಾರ್ಯಪ್ರವೃತರಾಗಿದ್ದಾರೆ ಎಂದರು.

ರೆಸ್ಟೋರೆಂಟ್‌, ಮದ್ಯಪಾನ ಸರಬರಾಜು ಮಾಡುವ ಹೋಟೆಲ್‌ಗಳು ಅಬಕಾರಿ ಇಲಾಖೆ ಜೊತೆ ಪೊಲೀಸ್‌ ಇಲಾಖೆಯಿಂದಲೂ ಅನುಮತಿ ಪಡೆಯಬೇಕು. ಧ್ವನಿ ವರ್ಧಕ ಅಳವಡಿಸುವವರು ನಿರ್ದಿಷ್ಟ ಡೆಸಿಬಲ್‌ ಮೀರದಂತೆ ಕಾರ್ಯಕ್ರಮ ನಡೆಸಬೇಕು. ಡಿ 31ರ ರಾತ್ರಿ 7 ಗಂಟೆ ನಂತರ ಉತ್ತನಹಳ್ಳಿ ಕ್ರಾಸ್‌ ಗೇಟ್‌, ದೈವಿವನ ಗೇಟ್‌, ಚಾಮುಂಡಿ ಪಾದ ಗೇಟ್‌, ಲಲಿತ್‌ ಮಹಲ್‌ ಗೇಟ್‌ ಮೂಲಕ ನಿರ್ಬಂಧ ಮಾಡಲಾಗುವುದು. ರಾತ್ರಿ 9 ಗಂಟೆ ನಂತರ ಬೆಟ್ಟಕ್ಕೆ ಬೆಟ್ಟದಿಂದ ಬರುವವರು ತಾವರೆಕಟ್ಟೆ ಗೇಟ್‌ ಮೂಲಕ ಬರಬೇಕು ಎಂದು ಸೂಚಿಸಿದರು.

ಡಿಸಿಪಿಗಳಾದ ಎಂ. ಮುತ್ತುರಾಜ್‌ ಹಾಗೂ ಎಸ್‌. ಜಾನ್ಹವಿ ಜೊತೆಯಲ್ಲಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!