ಕೊಬ್ಬರಿ ಬೆಲೆ ಕುಸಿತದಿಂದ ಚಿಂತೆಗೀಡಾಗಿದ್ದ ತೆಂಗು ಬೆಳೆದಾರರ ಬೆನ್ನಿಗೆ ಈಗ ಕೇಂದ್ರ ಸರ್ಕಾರ ನಿಂತಿದೆ. ಕೇಂದ್ರ ಸರ್ಕಾರವು ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 300 ರೂಪಾಯಿ ಏರಿಕೆ ಮಾಡಿದೆ. ಉಂಡೆ ಕೊಬ್ಬರಿಗೆ 250 ರೂಪಾಯಿಗಳನ್ನು ಏರಿಕೆ ಮಾಡಲು ತೀರ್ಮಾನಿಸಿದೆ.
ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024ರ ಋತುವಿಗೆ ಕೊಬ್ಬರಿ ಬೆಂಬಲ ಬೆಲೆಯನ್ನು ಅನುಮೋದಿಸಿದೆ ಎಂದು ಅಧಿಕೃತ ವರದಿಯಲ್ಲಿ ತಿಳಿಸಿದೆ. ಇನ್ನು ಕಳೆದ ವರ್ಷ ಸರ್ಕಾರವು ಮಿಲ್ಲಿಂಗ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 270 ರೂಪಾಯಿ ಹೆಚ್ಚಿಸಿದ್ದ ಕೇಂದ್ರ ಉಂಡೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 750 ರೂಪಾಯಿ ಹೆಚ್ಚಳ ಮಾಡಿತ್ತು.
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಶಿಫಾರಸುಗಳು ಹಾಗೂ ತೆಂಗು ಬೆಳೆಯುವ ವಿವಿಧ ರಾಜ್ಯಗಳ ಅಭಿಪ್ರಾಯಗಳ ಆಧಾರದ ಮೇಲೆ ಈ ಏರಿಕೆಯನ್ನು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ. “2024ರ ಋತುವಿನಲ್ಲಿ ಮಿಲ್ಲಿಂಗ್ ಕೊಬ್ಬರಿಗೆ ಕ್ವಿಂಟಾಲ್‌ಗೆ 11,160 ರೂ. ನಿಗದಿಪಡಿಸಲಾಗಿದ್ದರೆ, ಉಂಡೆ ಕೊಬ್ಬರಿಗೆ 12,000 ರೂ. ನಿಗದಿಪಡಿಸಲಾಗಿದೆ. ಈ ಮೂಲಕ ಹಿಂದಿನ ಋತುವಿಗೆ ಹೋಲಿಸಿದರೆ ಮಿಲ್ಲಿಂಗ್ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 300 ರೂ. ಏರಿಕೆ ಮಾಡಲಾಗಿದ್ದರೆ, ಉಂಡೆ ಕೊಬ್ಬರಿಗೆ ಕ್ವಿಂಟಾಲ್‌ಗೆ 250 ರೂ. ಹೆಚ್ಚಳ ಮಾಡಲಾಗಿದೆ” ಎಂದು ಸಮಿತಿ ಹೇಳಿಕೆ ನೀಡಿದೆ.