ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಡಂಕಿ’ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲಿ ನಿರೀಕ್ಷೆಗೂ ಮೀರಿ ಲಾಭ ಮಾಡುವ ಸಾಧ್ಯತೆ ಇದೆ.
ಈ ಹಿಂದೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಗೆ ಜವಾನ್, ಪಠಾಣ್ ಚಿತ್ರಗಳು ಭರ್ಜರಿ ಯಶಸ್ಸು ತಂದು ಕೊಟ್ಟಿದ್ದು, ಮತ್ತೆ ಗೆಲುವಿನ ಲಯಕ್ಕೆ ತಂದು ನಿಲ್ಲಿಸಿದೆ. ‘ಡಂಕಿ’ ಚಿತ್ರ ಕೂಡಾ ಯಶಸ್ಸು ಗಳಿಸಬಹುದು ಎಂಬ ಲೆಕ್ಕಾಚಾರ ಬಾಲಿವುಡ್ ಚಿತ್ರರಂಗದಲ್ಲಿ ವ್ಯಕ್ತವಾಗುತ್ತಿದೆ.
ಇದರ ಮಧ್ಯೆ ಅಕ್ರಮ ವಲಸೆ ಹಾಗೂ ದೇಶದ ಬಗೆಗಿನ ಪ್ರೀತಿಯನ್ನು ಹೊಂದಿರುವ ಈ ಚಿತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವೀಕ್ಷಿಸಿದ್ದಾರೆ. ಭಾನುವಾರದಂದು ರಾಷ್ಟ್ರಪತಿ ಭವನದಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಚಿತ್ರ ವೀಕ್ಷಿಸಿದ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.