ಬೆಂಗಳೂರು : ಸಂಸತ್ ಮೇಲಿನ ದಾಳಿಯ ಭದ್ರತಾ ವೈಫಲ್ಯಕ್ಕೆ ಉತ್ತರ ಕೊಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ಕರ್ತವ್ಯ ಎಂದು ಹಿರಿಯ ರಾಜ್ಯ ಸಭಾ ಸದಸ್ಯ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಪರಮೋಚ್ಛ ವೇದಿಕೆಯಾಗಿರುವ ಸಂಸತ್ತಿನ ಮೇಲಿನ ದಾಳಿಯ ಹೊಣೆಯನ್ನು ಸರಕಾರವೇ ಹೊರಬೇಕು. ನ್ಯಾಯ ಕೇಳಲು ಬಂದವರನ್ನೇ ಅಮಾನತು ಮಾಡುವುದು ಎಷ್ಟು ಸರಿ? ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ದಿನವಾಗಿದೆʼ ಎಂದಿದ್ದಾರೆ.
ರಕ್ಷಣಾ ವೈಫಲ್ಯದ ಬಗ್ಗೆ ಉತ್ತರ ಕೊಡುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ನ್ಯಾಯಯುತವಾಗಿ ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ. ಆದರೆ, ಪ್ರತಿಪಕ್ಷಗಳ ಮಾತಿಗೆ ಕೇಂದ್ರ ಸರ್ಕಾರವು ಮನ್ನಣೆ ನೀಡದೆ ಹಿಟ್ಲರ್ ಧೋರಣೆ ತಾಳಿದೆ ಎಂದು ಅವರು ಕಿಡಿಕಾರಿದ್ದಾರೆ.
ಭದ್ರತಾ ಲೋಪ ಉಂಟಾಗಲು ಕಾರಣರಾದ ಕರ್ನಾಟಕದ ಸಂಸತ್ ಸದಸ್ಯ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡುವುದನ್ನು ಬಿಟ್ಟು ಪ್ರತಿಪಕ್ಷಗಳ 141 ಸಂಸದರನ್ನು ಅಮಾನತು ಮಾಡಿದೆ. ಇದು ನಿಜಕ್ಕೂ ಖಂಡನೀಯ.
ಭಾರತೀಯ ಸಂಸತ್ ವ್ಯವಸ್ಥೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲು ಎಂದು ಅವರು ಟೀಕಿಸಿದ್ದಾರೆ.
ಈ ಭದ್ರತಾ ವೈಫಲ್ಯದ ಬಗ್ಗೆ ಉತ್ತರ ಕೊಡಿ ಎಂಬ ಸಣ್ಣ ಬೇಡಿಕೆಯನ್ನು ನಾವು ಕೇಳಿದ್ದವು. ಇಷ್ಟಕ್ಕೆ ಬೆದರಿದ ಆಡಳಿತ ಪಕ್ಷದವರು ವಿರೋಧ ಪಕ್ಷದ 141 ಸಂಸದರನ್ನು ಅಮಾನತು ಮಾಡಿದೆ. ಇವರು ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಹೋದರು. ಆದರೆ, ಅದು ಆಗಲಿಲ್ಲ. ಅದಕ್ಕೆ ಈಗ ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬುದು ಇವರ ಅಜೆಂಡಾ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ ಎಂದೂ ಕಿಡಿ ಕಾರಿದ್ದಾರೆ.
ಚರ್ಚೆಗೆ ಅವಕಾಶ ಕೊಡುವುದು ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆ. ದೇಶದಲ್ಲಿ ಎಂಥ ಘಟನೆಗಳೇ ನಡೆದರೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಸ್ಥಳ ಸಂಸತ್ ಮಾತ್ರ.
ಅಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬೇಕು. ಇನ್ನು ಆಡಳಿತ ಪಕ್ಷದಲ್ಲಿರುವವರು ಕಿವಿಯಾಗಿರಬೇಕು. ಪ್ರತಿಪಕ್ಷಗಳ ಚರ್ಚೆಯನ್ನು, ಸಲಹೆಯನ್ನು ಕೇಳಿಸಿಕೊಳ್ಳಬೇಕು. ಆದರೆ, ಇಲ್ಲಿ ಅದ್ಯಾವುದೂ ಆಗುತ್ತಿಲ್ಲ.
ಈಗ ಬಿಜೆಪಿ ಸರ್ಕಾರವು ಕಣ್ಣು, ಕಿವಿ ಎಲ್ಲವನ್ನೂ ಮುಚ್ಚಿ ಇಂತಹ ವರ್ತನೆ ಮಾಡುತ್ತಿದೆ. ಸಂಸತ್ ಇತಿಹಾಸಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಟೀಕಿಸಿದ್ದಾರೆ.