• ಡಾ. ಶೋಭಾರಾಣಿ
ಅತ್ತ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಒಂದೂರು. ಪಟ್ಟಣದ ರೀತಿ ರಿವಾಜುಗಳಿಗೆ ತೆರೆದುಕೊಳ್ಳಲಾಗದೇ, ಹಳ್ಳಿಯ ಢಾಳಾದ ಪರಿಪಾಟಲುಗಳನ್ನು ಒಪ್ಪಿಕೊಳ್ಳಲಾಗದೇ ತಮ್ಮ ತಮ್ಮ ಗ್ರಾಮ ಲೋಕದ ದೈನಿಕ ಬಾಳಿನ ಸುಖ, ದುಃಖಗಳಲ್ಲಿ ಮುಳುಗಿರುವ ಜನ, ಇಂತಿಪ್ಪ ಊರಿನಲ್ಲಿ ಹೀಗೆ ಧಾವಂತವಿಲ್ಲದ ಒಂದು ಹಗಲಿನಲ್ಲಿ ಈ ಲೇಖನದ ಕಥಾ ನಾಯಕಿ ಗೌರಿ (ಹೆಸರು ಬದಲಿಸಲಾಗಿದೆ) ಮಾತಿಗೆ ದಕ್ಕಿದ್ದು. ಜೀವಸೆಲೆಯ ಜಿನುಗಿನಂತೆ ಕಾಣುತ್ತಿದ್ದ ಗೌರಿ, ಮದುವೆ ವಯಸ್ಸು ಮೀರಿದ್ದರೂ ಮದುವೆಯಾಗದೆ ಮನೆಯ ದೇಖರೇಖಗಳನ್ನು ನೋಡಿಕೊಳ್ಳುತ್ತಾ ಗಿಜಿ ಗುಡುವ ತನ್ನ ಪರಿಸರದಲ್ಲೂ ನಿರ್ಲಿಪ್ತವಾಗಿ ಬದುಕುವುದನ್ನು ರೂಢಿಸಿಕೊಂಡಿದ್ದಾಳೆ. ಗೌರಿ ಹೆಚ್ಚು ಓದಿಕೊಂಡಾಕೆಯಲ್ಲ, ತನ್ನ ಊರಿಗೆ ಹೊಂದಿಕೊಂಡಂ ತಿರುವ ದೊಡ್ಡ ಮಾಲೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ನಿರೀಕ್ಷೆಗಿಂತ ತುಸು ಹೆಚ್ಚೇ ಹಣ ಕೈ ಸೇರುತ್ತಿದೆ. ಎರಡು ಸೀರೇಲಿ ವರ್ಷಪೂರ್ತಿ ಬದುಕೋಕೆ ನನ್ನಿಂದಾಗಲ್ಲ ಮೇಡಂ… ಅದಕ್ಕೆ ರೈತನನ್ನು ಮದುವೆ ಆಗಲ್ಲ ಅಂದವಳು, ಹಾಗೆ ಹೇಳಲು ಕಾರಣವೋ ಎಂಬಂತೆ ತನ್ನ ಅಮ್ಮನ ಎರಡು ಸೀರೆಗಳ ಕಥೆ ಹೇಳಿದಳು.
‘ಮೇಡಂ, ನಮ್ಮ ತಂದೆಗೆ ಪಿತ್ರಾರ್ಜಿತವಾಗಿ ಸಾಕಷ್ಟು ಆಸ್ತಿ ಬಂದಿತ್ತು, ನಮ್ಮ ತಾಯಿಯನ್ನು ಮದುವೆ ಆದ ಮೇಲೆ ಕೂಡ ಇಬ್ಬರೂ ಚೆನ್ನಾಗಿ ದುಡಿದು ಸ್ವಯಾರ್ಜಿತವಾಗಿ ಇನ್ನೊಂದಷ್ಟು ಆಸ್ತಿ ಮಾಡಿದರು. ನಮ್ಮ ತಾಯಿ ಮನೆ ಕೆಲಸದ ಜೊತೆಗೆ ಬಿಡುವಿಲ್ಲದೇ ಹೊಲದಲ್ಲಿಯೂ ದುಡಿಯುತ್ತಿದ್ದರು, ಶ್ರಾವಣ ಬಂದಾಗ ಅಪ್ಪ-ಅಮ್ಮನಿಗೆ ಸೀರೆ ಕೊಡಿಸಲು ಕರಕೊಂಡು ಹೋಗ್ತಾ ಇದ್ರು, ವರ್ಷಕ್ಕೆ ಎರಡೇ ಸೀರೆ, ಅದೂ ಕೊಡಿಸುವಾಗಲೆಲ್ಲಾ ಮನೇಲಿ ಇರೋಳಿಗೆ ಯಾಕೆ ಎರಡು ಸೀರೆ ಅನ್ನೋ ಉವಾಚ ನಮ್ಮಪ್ಪನಿಂದ, ನಮ್ಮಮ್ಮನ ಮುಖ ನೋಡೋಕೆ ಎಷ್ಟು ಕಷ್ಟ ಆಗೋದು ಮೇಡಂ. ಸೀರೆ ಕೊಳ್ಳುವ ಸ್ಥಿತಿ ಇದ್ದರೂ ಕೊಡಿಸುವ ಮನಸ್ಥಿತಿ ಇರಲಿಲ್ಲ. ಅಮ್ಮನಿಗೆ ಬಿಡುವು ಅನ್ನೋದೆ ಇರಲಿಲ್ಲ. ಆಗಲೇ ನಾ ತೀರ್ಮಾನ ಮಾಡಿದ್ದು ರೈತನನ್ನು ಮದುವೆ ಆಗ್ಲೆ ಬಾರ್ದು ಮತ್ತು ಎಲ್ಲಾದರೂ ಕೆಲಸದಲ್ಲಿ ಇರೋರನ್ನು, ತಿಂಗಳ ತಿಂಗಳ ಸಂಬಳ ಬರುವವರನ್ನು ಮದುವೆ ಆಗಬೇಕು ಅಂತ’ ಆಶ್ಚರ್ಯದಿಂದ ನಾನು ಹುಬ್ಬೇರಿಸಿದೆ.
“ಇನ್ನೇನು ಮೇಡಮ್ಮಾರೆ ಭೂಮಾಯಿ ಹೆಣ್ಣಲ್ವಾ, ಸದಾ ಅವಳ ಜೊತೆ ಇರೋ ರೈತ ಭೂಮಿಯನ್ನು ಪೂಜಿಸಿ ಗೌರವ ಕೊಡ್ತಾನೆ, ಕಳ್ಕೊಂಡ ಹೆಂಡ್ತಿ ಜೊತೆ ನಡವಳಿಕೆ ಹೆಂಗಿರಬೇಕು ಅಂತ ಅವನಿಗೆ ಗೊತ್ತಿರುವಷ್ಟು ಬೇರೆ ಕೆಲಸದಲ್ಲಿರೋರಿಗೆ ಎಲ್ಲಿ ಗೊತ್ತಿರುತ್ತೆ ಹೇಳಿ ಗೌರಿಯ ತರ್ಕದ ಮಾತುಗಳು ಶುಷ್ಕದಂತೆ ಆಕ್ಷಣಕ್ಕೆ ಕಂಡಿದ್ದು ಸುಳ್ಳಲ್ಲ. ಬೆಳೆ ನಷ್ಟ, ಸಾಲ ಬಾಧೆ ಇತ್ಯಾದಿಗಳ ನಡುವೆಯೂ ನಗರದಲ್ಲಿನ ಬೃಹದಾಕಾರದ ಕಂಪೆನಿಗಳಲ್ಲಿ ಕೆಲಸ ಮಾಡುವ
ಯುವಕರು, ಒತ್ತಡ, ಜಂಜಾಟ, ಧಾವಂತದ ಬದುಕಿನಿಂದ ಬಿಡುಗಡೆ ಹೊಂದಲು ಕೃಷಿಯತ್ತ ಒಲವು ತೋರಿಸುತ್ತಿರುವುದು ಸತ್ಯವೂ ಕೂಡ. ಇದು ಗೌರಿಗೆ ಗೊತ್ತಿಲ್ಲದ ವಿಷಯ. ನಗರದ ಯುವಕರ ವೈವಾಹಿಕ ಸಮಸ್ಯೆಗಳು ದಿನೇ ದಿನೇ ಜಟಿಲಗೊಳ್ಳುತ್ತಿವೆ, ಸಣ್ಣ ಸಣ್ಣ ಮುನಿಸುಗಳೇ ಬೆಟ್ಟವಾಗಿ, ಸ್ವಪ್ರತಿಷ್ಠೆಗಳಲ್ಲಿ ಬೆಂದು ವಿಚ್ಛೇದನಗಳಲ್ಲಿ ಕೊನೆಗೊಳ್ಳುತ್ತಿವೆ. ತನ್ನ ಕುಟುಂಬದಲ್ಲಾದ ಎರಡು ಸೀರೆ ಕಥೆ, ತನ್ನ ಸಣ್ಣೂರಿನ ಆಸುಪಾಸಿನಲ್ಲಿ ನಡೆದ ಸಣ್ಣ ಪುಟ್ಟ ಘಟನೆಗಳನ್ನೇ ಮುಂದಿಟ್ಟುಕೊಂಡು ರೈತನನ್ನು ಮದುವೆಯಾಗಲೊಲ್ಲದ ಗೌರಿಗೆ ದೊಡ್ಡ ಊರುಗಳಲ್ಲಿ ನಡೆದ ದೊಡ್ಡ ದೊಡ್ಡ ದಾರುಣ ಕಥೆಗಳ ಅರಿವಿಲ್ಲ. ಅದೆಷ್ಟೇ ದೊಡ್ಡ ಸಂಬಳದ ಯಜಮಾನರಾಗಿದ್ದರೂ ಈ ವರ್ತಮಾನದಲ್ಲಿ ಯಾವ ಆಸಕ್ತಿಗಳಿಲ್ಲದೇ ರೂಕ್ಷವಾಗಿ ಬದುಕುತ್ತಿರುವ ಅದೆಷ್ಟೋ ನಗರದ ಮಂದಿ
ಆಯಾಚಿತವಾಗಿ ಕಣ್ಣ ಮುಂದೆ ಬಂದರು. ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಾಣುವುದು, ಕನಸಿನೊಳಕ್ಕೆ ಕುದುರೆ ಏರಿ ಬರುವ ರಾಜಕುಮಾರನನ್ನು ಈ ಮಲ್ಲಿಗೆ ತೂಕದ ಹೆಣ್ಣುಮಕ್ಕಳು ಬರಮಾಡಿಕೊಳ್ಳುವುದು ಅವರ ಜನ್ಮಸಿದ್ಧ ಹಕ್ಕು. ಡಾಕ್ಟರ್, ಇಂಜಿನಿಯರ್, ನೂರಾರು ಜನರಿಗೆ ಸಂಬಳ ಕೊಡುವ ಉದ್ಯಮಿ… ಇವರೇ ಅವರ ಮದುವೆ ಕನಸಿನಲ್ಲಿ ಹೆಚ್ಚಿನ ಪಾಲುದಾರರು. ರೈತ ಎಂದಿಗೂ ಅವಳ ಮಳೆಯಲ್ಲಿ ದುಡಿಯುತ್ತಾ ಗ್ಲಾಮರ್ ಕಳೆದುಕೊಂಡ, ಫೇಸ್ ಬುಕ್, ಇನ್‌ಸ್ಟಾದಲ್ಲಿ ಅಕೌಂಟಿಲ್ಲದ, ವೀಕೆಂಡಿಲ್ಲದ ಸಾಧಾರಣ ಜೀವ. ಎಲ್ಲಕ್ಕಿಂತ ಹೆಚ್ಚಾಗಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದ ಲಿಪ್‌ಸ್ಟಿಕ್ಕು, ನೈಲ್ ಪಾಲಿಷ್ ಅವನ ಹಳ್ಳಿ ಮನೆಗೆ ಡೆಲಿವರಿ ಯಾಗುವುದು ಆಕೆಗೆ ಡೌಟ್. ಇಲ್ಲಿ ಎಡವಿದ್ದು ಅವಳಾ?? ಅಥವಾ ಕೃಷಿಯನ್ನು ನಿಕೃಷ್ಟಗೊಳಿಸುತ್ತಿರುವ ನಾವಾ??
ಪಟ್ಟಣವೆಂದರೆ ಬೇರು ಕಿತ್ತಂತಹ ಪರಿಸ್ಥಿತಿ, ಕೆಟ್ಟು ಪಟ್ಟಣ ಸೇರು’ ಎಂಬ ಗಾದೆ ಅದೆಷ್ಟು ಪ್ರಚಲಿತವಾಗಿತ್ತು ಎಂದರೆ ಹಲವು ವರ್ಷಗಳ ಹಿಂದೆ ದೂರದ ಪಟ್ಟಣಗಳಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ, ಪಕ್ಕದ ಹಳ್ಳಿಯೇ ನೆಮ್ಮದಿಯ ತಾಣವೆಂದು ಪರಿಗಣಿಸಿ ತಮ್ಮ ಮಕ್ಕಳನ್ನು ಪಕ್ಕದೂರಿನ ರೈತನಿಗೆ ಮದುವೆ ಮಾಡಿಕೊಡುತ್ತಿದ್ದ ಪೋಷಕರು, ಹೀಗೆ ಕಾಲಾನಂತರ ಬದಲಾಗಿದ್ದಾದರೂ ಯಾಕೆ? ಈಗಲೂ ಹಳ್ಳಿಗಳನ್ನು ಅನಕ್ಷರತೆ, ಅಜ್ಞಾನ, ಬಡತನ, ಅಸಮಾನತೆ, ಮೂಲಭೂತ ಸೌಲಭ್ಯಗಳಿಲ್ಲದ ಪ್ರದೇಶವೆಂದೂ, ಪಟ್ಟಣವೆಂದರೆ ಸುಸ್ಥಿರ ಬದುಕನ್ನು ನೀಡುವ ತಾಣವೆಂದೂ ಬಿಂಬಿತವಾಗುತ್ತಿರುವುದರಿಂದ, ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹಳ್ಳಿಯ ಸ್ಥಿತಿವಂತ ರೈತನಿಗೂ ಕೊಡಲು ಹಿಂಜರಿಯುತ್ತಿರುವುದನ್ನು ಕಾಣಬಹುದಾಗಿದೆ. ಹಳ್ಳಿಗಳು ಖಾಲಿಯಾಗುತ್ತಿವೆ, ಪಟ್ಟಣದವರ ತಾತ್ಕಾಲಿಕ ಖಯಾಲಿಗಳನ್ನು ಪೂರೈಸುವ, ವಾರಾಂತ್ಯಗಳನ್ನು ಕಳೆಯುವ ತಾಣವಾಗುತ್ತಿವೆ.
ರೈತನಿಗೇಕೆ ಹೆಣ್ಣು ಸಿಗುತ್ತಿಲ್ಲ ಎಂಬ ಪ್ರಸ್ತುತ ಸಮಸ್ಯೆಗೆ ಸೂಕ್ತ ಕಾರಣಗಳ ಅಧ್ಯಯನ ಆಗಬೇಕಿದೆ. ಒಂದೆಡೆ ಹಳ್ಳಿಯಲ್ಲಿ ಶಿಷ್ಟಚಾರ ಮತ್ತು ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರಿಗೆ ನಿರ್ಬಂಧಗಳ ಹೇರಿಕೆ ಹೆಚ್ಚು, ಇನ್ನೊಂದೆಡೆ ಹೆಣ್ಣುಮಕ್ಕಳಲ್ಲಿ ಕೃಷಿಯ ಕುರಿತ ನಿರಾಸಕ್ತಿ ಮತ್ತು ಹುಡುಗನಿಗೇ ಇಂತಹದೇ ಉದ್ಯೋಗ ಇರಬೇಕೆಂಬ ನಿರೀಕ್ಷೆ ಕೂಡ ರೈತನಿಗೆ ಹೆಣ್ಣು ಅಲಭ್ಯವಾಗಲು ಕಾರಣವಿರಬಹುದು. ಇಷ್ಟೇ ಅಲ್ಲದೆ, ರೈತರೆಂದರೆ ಬಡವರು, ದಿವಾಳಿಯಾಗಿರುವವರು, ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರೆಂದೂ ಮಾಧ್ಯಮ ದಲ್ಲಿ ಪ್ರಚಾರವಾದಷ್ಟೂ ರೈತರಿಗೆ ಹೆಣ್ಣು ಸಿಗುವುದು ಕಷ್ಟವಾಗುತ್ತಿದೆ.
ಯಶಸ್ವಿ ರೈತರ ಯಶೋಗಾಥೆಗಳನ್ನು, ಕೃಷಿಯನ್ನು ಉದ್ಯಮ ವಾಗಿಸಿ ಹಲವರ ಬದುಕಿಗೆ ಆಸರೆಯಾದವರನ್ನು ಮಾಧ್ಯಮಗಳು ಹೆಚ್ಚು ಹೆಚ್ಚು ಸಮಾಜಕ್ಕೆ ಪರಿಚಯಿಸುವಂತಾಗಬೇಕು. ಯಶಸ್ವಿ ರೈತರ ಸುದ್ದಿಗಳಿಗೆ ಪತ್ರಿಕೆಗಳ ಮೊದಲ ಪುಟ ಮೀಸಲಾಗಬೇಕು. ರೈತರನ್ನು ಬರೀ ಅನ್ನದಾತ, ದೇಶದ ಬೆನ್ನೆಲುಬು ಎಂಬ ವ್ಯಾಖ್ಯಾನ ಗಳಿಗಷ್ಟೇ ಸೀಮಿತ ಮಾಡದೆ ಕೃಷಿ ಒಂದು ಲಾಭದಾಯಕ ಉದ್ಯಮ ಎಂಬುದನ್ನು ಮನದಟ್ಟು ಮಾಡಬೇಕಿದೆ. ವಿದ್ಯಾವಂತ ಹೆಣ್ಣಿನ ಮೇಲ್ವಿಚಾರಣೆಯಲ್ಲಿ ಯಾವುದೇ ಕೆಲಸಗಳು ನಷ್ಟ ಹೊಂದುವುದು ಅಪರೂಪ. ಅದಕ್ಕೆ ಕೃಷಿ ಚಟುವಟಿಕೆ ಹೊರತಲ್ಲ. ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ಕೃಷಿಯಲ್ಲಿ ತೊಡಗುವಂತಾದರೆ ಕೃಷಿ ಲಾಭದಾಯಕ ಉದ್ಯಮವಾಗುವುದರಲ್ಲಿ ಸಂಶಯವಿಲ್ಲ.
(ಲೇಖಕಿ ಶೋಭಾರಾಣಿ, ರಾಷ್ಟ್ರಪ್ರಶಸ್ತಿ ವಿಜೇತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.)
drshobharanirdpr@gmail.com