ಬುಧವಾರ ಯುವಕರಿಬ್ಬರು ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ನೆಗೆದು ಘೋಷಣೆ ಕೂಗಿ ಹಳದಿ ಹೊಗೆಯ ದಟ್ಟ ಮೋಡಗಳನ್ನು ಎಬ್ಬಿಸಿದ ಘಟನೆ ಆಳುವವರ ಕಣ್ಣು ತೆರೆಸಬೇಕಿದೆ. ಸಂಸತ್ತಿನ ಭದ್ರತೆಯ ಬಿರುಕನ್ನು ತಕ್ಷಣವೇ ಮುಚ್ಚಬೇಕಿದೆ.
ಸಂಸತ್ತಿನ ಭದ್ರತೆಗೆ ಕನ್ನವಿಟ್ಟ ಈ ಕೃತ್ಯ ಖಂಡನೀಯ. ಪ್ರತಿಭಟನೆಯ ಈ ವಿಧಾನವನ್ನು ಒಪ್ಪಲಾಗದು. ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ ಈ ತಪ್ಪುದಾರಿಯನ್ನು ಸಮರ್ಥಿಸಲಾಗದು. ಪರಿಸ್ಥಿತಿ ಅದೆಷ್ಟೇ ನಿರಾಶಾದಾಯಕ ಆಗಿದ್ದರೂ ತೀವ್ರಪಂಥೀಯ ಹಾದಿ ತರವಲ್ಲ. ಗುರಿ ಮಾತ್ರವಲ್ಲ, ಅದನ್ನು ಸಾಧಿಸಲು ತುಳಿಯುವ ದಾರಿಯೂ ಬಹುಮುಖ್ಯ. ಭಾರತೀಯ ಜನತಂತ್ರದ ಭೌತಿಕ ಪ್ರತೀಕವಾದ ಸಂಸತ್ತಿನ ರಕ್ಷಣೆ ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ಈ ಕರ್ತವ್ಯದಲ್ಲಿ ಆಗಿರುವ ಈ ಲೋಪ ಗಂಭೀರವೆಂದು ಗೃಹಮಂತ್ರಿ ಅಮಿತ್ ಶಾ ಅವರೇ ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷಗಳು ಈ ಸಂಗತಿಯನ್ನು ರಾಜಕೀಯಗೊಳಿಸದಂತೆ ಬುದ್ಧಿ ಹೇಳಿದ್ದಾರೆ.
ಸಂಸತ್ ಭದ್ರತೆಯಲ್ಲಿನ ಈ ಬಿರುಕಿನ ಕುರಿತು ಪ್ರಧಾನಿ ಮತ್ತು ಗೃಹಮಂತ್ರಿ ಹೇಳಿಕೆ ನೀಡುವಂತೆ ಧರಣಿ ನಡೆಸಿದ ಪ್ರತಿಪಕ್ಷಗಳ 14 ಮಂದಿ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಸದನದಿಂದ ವಜಾ ಮಾಡಿರುವ ನಡೆ ಜನತಂತ್ರದ ‘ವಿಶ್ವಗುರು’ವಿಗೆ ಶೋಭಿಸುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಬೆಲೆ ಏರಿಕೆ, ಜಿಎಸ್‌ಟಿ ವಿರೋಧ, ಮಣಿಪುರದ ಗಲಭೆಗಳ ಕುರಿತು ಪ್ರತಿಭಟಿಸಿದ ಪ್ರತಿಪಕ್ಷಗಳ ಸದಸ್ಯರನ್ನು ಅಮಾನತ್ತಿನ ಶಿಕ್ಷೆಗೆ 71 ಸಲ ಗುರಿಪಡಿಸಲಾಗಿದೆ!
ಸದನಕ್ಕೆ ನೆಗೆದು ಅವಾಂತರ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿದೆ. ಇವರು ಮುಂದೆ ಮಾಡಿರುವ ಕಾರಣಗಳೇ ಅಸಲು ಕಾರಣಗಳಾಗಿದ್ದರೆ ಅವುಗಳನ್ನು ಸುಲಭದಲ್ಲಿ ತಳ್ಳಿ ಹಾಕುವಂತಿಲ್ಲ. ಕೃತ್ಯ ಎಸಗಿದವರು ನೀಡಿರುವ ನಿರುದ್ಯೋಗ, ಬಡತನ, ಅತ್ಯಾಚಾರ, ಭ್ರಷ್ಟಾಚಾರ, ಉಚಿತ ಶಿಕ್ಷಣ ಕುರಿತು ಎತ್ತಿರುವ ಪ್ರಶ್ನೆಗಳು ಖಂಡನೆಯ ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು. ಹುಸಿ ದೇಶ ಭಕ್ತಿಯ ಆಕ್ರೋಶದಲ್ಲಿ ಸುಟ್ಟು ಹೋಗಕೂಡದು. ತಾಂಡವ ಆಡಿರುವ ನಿರುದ್ಯೋಗ ಯುವಜನರನ್ನು ಹತಾಶೆಗೆ ತಳ್ಳಿದೆ. ಆಳುವ ವ್ಯವಸ್ಥೆ ಇವರನ್ನು ಅಲ್ಪಕಾಲಿಕ ರಾಜಕೀಯ ಲಾಭಕ್ಕಾಗಿ ಹಾದಿಬೀದಿಗಳ ಪುಂಡರನ್ನಾಗಿಯೂ ಗುಂಪುಹತ್ಯೆಯ ಹತಾರುಗಳನ್ನಾಗಿಯೂ, ಅನೈತಿಕ ಪೊಲೀಸರನ್ನಾಗಿಯೂ ಮಾಡಿ ಕಟ್ಟು ಹರಿದ ಪಂಜಿನಂತೆ ತೂರಿಬಿಟ್ಟಿದೆ. ಕಟ್ಟಕಡೆಗೆ ಈ ಕಿಡಿಗೊಂಚಲುಗಳು ಸುಡುವುದು ಸಮಾಜವನ್ನೇ ಎಂಬ ಕಟುಸತ್ಯವನ್ನು ಅರಿಯಬೇಕಿದೆ. ಪ್ರಚಂಡ ವ್ಯಕ್ತಿಪೂಜೆಯಲ್ಲಿ ಮೈಮರೆತ ದೇಶದ ದೇಹ ತೀವ್ರ ಗಾಯಗೊಂಡಿದೆ. ಅವಯವಗಳು ಜೋಮುಗಟ್ಟಿವೆ. ನೋವನ್ನು ಮಿದುಳಿಗೆ ಒಯ್ದು ಮುಟ್ಟಿಸುವ ನರವನ್ನು ಕಡಿದು ಕೆಡವಲಾಗಿದೆ. ‘ದೇಹಕ್ಕೆ ಬಿದ್ದ ಪೆಟ್ಟು ಮೆದುಳಿಗೆ ತಲುಪುತ್ತಿಲ್ಲ’.
ಇತಿಹಾಸ ಮರುಕಳಿಸಿದೆ. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ್ದವರು ಭಯೋತ್ಪಾದಕರು. ಎರಡು ದಶಕಗಳ ನಂತರ ಸಂಸತ್ ಭವನದ ಭದ್ರತೆಯ ಅತಿಕ್ರಮಣದಲ್ಲಿ ತೊಡಗಿದವರು ಅಪರಾಧದ ಹಿನ್ನೆಲೆ ಇಲ್ಲದವರು. ಮೈಸೂರಿನ ಮನೋರಂಜನ್ ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ. ಸಾಗರ್ ಶರ್ಮ ಇ-ರಿಕ್ಷಾ ಚಾಲಕ, ಲಲಿತ್ ಝಾ ಶಿಕ್ಷಕ. ಹರಿಯಾಣದ 37 ವರ್ಷ ವಯಸ್ಸಿನ ನೀಲಂ ಆಝಾದ್ ಎಂ.ಎಡ್- ಎಂ.ಫಿಲ್ ಮಾಡಿ ಎನ್.ಇ.ಟಿ. ಪಾಸಾಗಿದ್ದ ಹೆಣ್ಣುಮಗಳು. ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾದ ಮಹಿಳಾ ಕುಸ್ತಿಪಟುಗಳು, ಅತ್ಯಾಚಾರ- ಹತ್ಯೆಗೀಡಾದ ಮಣಿಪುರದ ಮಹಿಳೆಯರು, ರೈತರ ಪರ ಪ್ರತಿಭಟಿಸಿದ್ದಾಕೆ. ‘ನನ್ನ ಮಗಳು ಭಯೋತ್ಪಾದಕಿಯಲ್ಲ, ಆಕೆಗೆ ಉದ್ಯೋಗ ಬೇಕಿತ್ತು ಅಷ್ಟೇ, ಬೆನ್ನುಹುರಿ ಗಾಯದಿಂದ ಬಳಲಿದ್ದಳು. ಈ ಕಾರಣಕ್ಕಾಗಿ ಮದುವೆ ಮಾಡಿಕೊಂಡಿಲ್ಲ’ ಎಂದು ನೀಲಂ ತಾಯಿ ರೋದಿಸಿದ್ದಾರೆ.
ಅಮೋಲ್ ಶಿಂಧೆ ಮಹಾರಾಷ್ಟ್ರದ ಪರಿಶಿಷ್ಟಜಾತಿಯ ಕೂಲಿಕಾರನೊಬ್ಬನ ಮಗ. ಸೇನೆ ಸೇರಲು ಬಯಸಿದ್ದ. ಹಲವು ಬಾರಿ ಲಿಖಿತ ಪರೀಕ್ಷೆಯಲ್ಲಿ ಫೇಲಾಗಿದ್ದ. ‘ಅಗ್ನಿವೀರ’ ನೇಮಕಾತಿಗೆ ವಯಸ್ಸು ಮೀರಿ ಹೋಗಿತ್ತು. ಎಲೆಕ್ಟ್ರಾನಿಕ್ ರಿಕ್ಷಾ ಚಾಲಕ ಶರ್ಮಾ ತನ್ನನ್ನು ಬರೆಹಗಾರ, ಕವಿ ಹಾಗೂ ತತ್ವಜ್ಞಾನಿ ಎಂದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕರೆದುಕೊಂಡಿದ್ದಾನೆ. ಶಿವ, ಕೃಷ್ಣ ಹಾಗೂ ಇತರೆ ದೇವತೆಗಳ ವಿಡಿಯೋಗಳು ಆತನ ಖಾತೆಯಲ್ಲಿವೆ. ನೀಲಂ ಆಝಾದ್ ಖಾತೆಯಲ್ಲಿ ಭಗತ್ ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿವೆ.
2020-21ರ ರೈತಪ್ರತಿಭಟನೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನೂ ಆಕೆ ಹಾಕಿಕೊಂಡಿದ್ದಾಳೆ. ಶಿಂಧೆ ಕ್ರೀಡೆಗಳ ಪದಕವಿಜೇತ. ಝಾ ಜಾಲತಾಣ ಖಾತೆಯಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಝಾದ್, ಸುಭಾಷ್ ಚಂದ್ರಬೋಸ್ ಹಾಗೂ ರಾಜಾರಾಮ್ ಮೋಹನರಾಯ್ ಫೋಟೋಗಳಿವೆ.
ಇ-ರಿಕ್ಷಾ ಚಾಲಕ ಸಾಗರ್ ಶರ್ಮ ಎಂಬ ಆಪಾದಿತನ ದಿನಚರಿ ಪೊಲೀಸ್ ವಶದಲ್ಲಿದೆ. ಈ ದಿನಚರಿಯ ಕೆಲ ಅಂಶಗಳನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಆತನ ಉದ್ದೀಪಿತ ಕ್ರಾಂತಿಕಾರಿ ಮನಸ್ಥಿತಿಯ ಟಿಪ್ಪಣಿಗಳು, ಆಲೋಚನೆಗಳು, ಭ್ರಮನಿರಸನದ ಭಾವನೆಗಳು, ದೇಶಭಕ್ತಿಯ ಕವಿತೆಗಳು ಸದರಿ ದಿನಚರಿಯಲ್ಲಿವೆ. 2015ರಲ್ಲಿ ಬರೆದ ಈ ದಿನಚರಿಯ ಮೊದಲ ಪುಟ ‘ಇಂಕ್ವಿಲಾಬ್ ಝಿಂದಾಬಾದ್’ ಘೋಷಣೆಯಿಂದ ಶುರುವಾಗಿದೆ. ಯಥಾಸ್ಥಿತಿಯನ್ನು ಮುರಿಯುವ ಬಯಕೆ ವ್ಯಕ್ತವಾಗಿದೆ. ‘ನಾನು ಕೇವಲ ನನ್ನ ದೇಶಕ್ಕಾಗಿ ಮತ್ತು ಅದರ ಪೂರ್ಣ ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತೇನೆ… ಅತ್ಯಾಚಾರ, ಭ್ರಷ್ಟಾಚಾರ, ಹಸಿವು, ಹತ್ಯೆಗಳು, ಅಪಹರಣ, ಕಳ್ಳಸಾಗಾಣಿಕೆ, ಧರ್ಮಕ್ಕಾಗಿ ಬಡಿದಾಟ ಮುಂತಾದವು ದೇಶಹಿತ ವಿರೋಧಿ ಸಂಗತಿಗಳು… ನಾನು ಸಿರಿವಂತನಲ್ಲ, ಮಧ್ಯಮವರ್ಗದ ಕುಟುಂಬದವನು, ದೇಶಕ್ಕಾಗಿ ಪ್ರಾಮಾಣಿಕತೆಯಿಂದ ದುಡಿಯುವ ಕೆಲ ಮಿತ್ರರು ಬೇಕಿದ್ದಾರೆ’ ಎಂದು ಬರೆದಿದ್ದಾನೆ.
ಇನ್ನೊಂದು ಪುಟದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಮಪ್ರಸಾದ್ ಬಿಸ್ಮಿಲ್ ಅವರ ‘ಸರ್ಫರೋಶ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇಂ ಹೈ…’ ಚಿರಸ್ಥಾಯಿ ಕ್ರಾಂತಿ ಕವಿತೆಯ ಸಾಲುಗಳಿವೆ. 2016ರಲ್ಲಿ ಬರೆದಿರುವ ಮತ್ತೊಂದು ಟಿಪ್ಪಣಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕಾಡಿರುವ ಸಮಸ್ಯೆಗಳನ್ನು ಬಣ್ಣಿಸಿದ್ದಾನೆ- ‘ಈ ದೇಶದಲ್ಲಿ ಶಿಕ್ಷಣವು ತಮಾಷೆಯಾಗಿ ಹೋಗಿದೆ. ನಾನು ಎದುರಿಸಿದ ಪ್ರಸಂಗಗಳಿಂದ ಈ ಅನುಭವವಾಗಿದೆ. ಎಲ್ಲರಿಗೂ ಉಚಿತ ಶಿಕ್ಷಣ ಸಿಗಬೇಕಿದೆ. ಹಣವಿಲ್ಲವೆಂಬ ಕಾರಣಕ್ಕಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು’. ಅಂದ ಹಾಗೆ ಶರ್ಮನ ಪೋಷಕರ ಬಳಿ ತಮ್ಮ ಮಗನ ಶುಲ್ಕ ತುಂಬಲು ಹಣವಿರಲಿಲ್ಲ. ಹೀಗಾಗಿ ಸಾಗರ್ ಓದು 12ನೆಯ ತರಗತಿಗೇ ನಿಂತು ಹೋಯಿತು.
ಬ್ರಿಟಿಷ್ ಸಾಮ್ರಾಜ್ಯದ ಕಿವುಡು ವ್ಯವಸ್ಥೆಯನ್ನು ಕದಲಿಸಲು 94 ವರ್ಷಗಳ ಹಿಂದೆ 1929ರಲ್ಲಿ ಇಬ್ಬರು ಪ್ರಖರ ದೇಶಪ್ರೇಮಿ ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲ್‌ಗೆ ಎರಡು ದುರ್ಬಲ ಬಾಂಬುಗಳನ್ನೂ, ಕ್ರಾಂತಿಕಾರಿ ಕರಪತ್ರಗಳನ್ನೂ ಎಸೆದು ಬ್ರಿಟಿಷ್ ವಿರೋಧದ ಮತ್ತು ಭಾರತಭಕ್ತಿಯ ಘೋಷಣೆಗಳನ್ನು ಕೂಗಿದ್ದರು. ಈ ಸೆಂಟ್ರಲ್ ಅಸೆಂಬ್ಲಿಯೇ ಅಂದಿನ ಅಧಿಕೃತ ಸಂಸತ್ ಸಭಾಂಗಣವಾಗಿತ್ತು. ಆ ಯುವಕರಿಬ್ಬರ ಹೆಸರುಗಳು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್. ಆದರೆ ಅಂದು ಪರಕೀಯರ ದಮನ ಜಾರಿಯಲ್ಲಿತ್ತು. ಇಂದು ಸ್ವಕೀಯ ಸರ್ಕಾರವಿದೆ. ನಮ್ಮ ಜನರೇ ಆರಿಸಿದ ಪ್ರತಿನಿಧಿಗಳು ಸಂಸತ್ತಿನಲ್ಲಿ ಕುಳಿತಿದ್ದಾರೆ.
ರಾಷ್ಟ್ರೀಯ ಭದ್ರತೆ- ಸುರಕ್ಷತೆಯ ಮಂತ್ರವನ್ನು ಹಗಲಿರುಳು ಜಪಿಸಿ ಪ್ರತಿಪಕ್ಷಗಳನ್ನು ಬೀಳುಗಳೆದು ಮೂರನೆಯ ಅವಧಿಗೆ ಅಧಿಕಾರ ಹಿಡಿಯಲು ಹೊರಟಿದೆ ಭಾರತೀಯ ಜನತಾಪಕ್ಷ.
ಲೋಕಸಭೆ ಜಾಲತಾಣದ ತಮ್ಮ ಖಾತೆಯ ಪಾಸ್‌ವರ್ಡನ್ನು ಹಂಚಿಕೊಂಡು ಸದನದ ಭದ್ರತೆಗೆ ಧಕ್ಕೆ ತಂದರೆಂದು ಮಹುವಾ ಮೊಯಿತ್ರಾ ಅವರನ್ನು ಮೊನ್ನೆ ಮೊನ್ನೆಯಷ್ಟೇ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು. ಈಗ ಉಂಟಾಗಿರುವ ಧಕ್ಕೆಗೆ ಯಾರನ್ನು ಉಚ್ಚಾಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.