Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡುವಂತೆ ಮೊದಲು ಹೇಳಿದ್ದು ನಾವೇ : ಲಕ್ಷ್ಮಣ್‌

ಮೈಸೂರು: ‘ಇಲ್ಲಿನ ವಿಮಾನನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಮೈಸೂರು ವಿಮಾನನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಹೇಳಿಕೆ ವೈಯಕ್ತಿಕವಾದುದೇ ಹೊರತು, ಪಕ್ಷ ಅಥವಾ ಸರ್ಕಾರದ ನಿಲುವಲ್ಲ. ಅಭಿಮಾನದಿಂದ ಆ ಹೇಳಿಕೆ ನೀಡಿದ್ದಾರಷ್ಟೆ’ ಎಂದು ಸ್ಪಷ್ಟಪಡಿಸಿದರು.

‘ಟಿಪ್ಪು ಹೆಸರಿಡುತ್ತೇವೆ ಎಂದು ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಾಗಲಿ ಹೇಳಿಲ್ಲ. ನಾವೂ ಕೇಳಿಲ್ಲ. ಹೀಗಿರುವಾಗ, ಸಂಸದ ಪ್ರತಾಪ ಸಿಂಹ ಅವರು ಈ ವಿಷಯದಲ್ಲೂ ರಾಜಕಾರಣ ಮಾಡುತ್ತಿರುವುದು ಹಾಗೂ ಟಿಪ‍್ಪು ಹೆಸರಿಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

ಸಿದ್ದರಾಮಯ್ಯ ಅವರು 2015ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದರು. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆಯೂ ತಿಳಿಸಿದ್ದರು. ಆಗಿನಿಂದಲೂ ಕೇಂದ್ರ ಸರ್ಕಾರ ಮರುನಾಮಕರಣ ಮಾಡಲಿಲ್ಲವೇಕೆ?, ಸಂಸದರಾಗಿರುವ ಪ್ರತಾಪ ಸಿಂಹ ಒತ್ತಾಯಿಸಲಿಲ್ಲವೇಕೆ, ಎಂಟು ವರ್ಷಗಳಿಂದ ಅವರು ಎಲ್ಲಿ ಮಲಗಿದ್ದರು?’ ಎಂದು ಕೇಳಿದರು.

‘ಮೊದಲಿಗ ಶಿಫಾರಸು ಮಾಡಿದ್ದೇ ನಾವು. ಇದ್ಯಾವುದೂ ಗೊತ್ತಿಲ್ಲದೇ ಸಂಸದರು ವಿನಾಕಾರಣ ಆರೋಪಿಸುವುದು ಸರಿಯಲ್ಲ. ಶಿಫಾರಸು ಪತ್ರವನ್ನು ಮತ್ತೊಮ್ಮೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ