ಜೋಹಾನ್ಸ್‌ಬರ್ಗ್ : ಸೂರ್ಯ ಶತಕದಾಟ ಮತ್ತು ಕುಲದೀಪ್ ಯಾದವ್ ಅವರ ಅಮೋಘ ದಾಳಿಯ ನೆರವಿನಿಂದ ಭಾರತ ತಂಡ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸಮಬಲ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಶತಕ ಸಿಡಿಸಿದರೆ, ಇತ್ತ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ತೋರಿದ ಕುಲದೀಪ್ ಹರಿಣಗಳನ್ನು ಕಟ್ಟಿಹಾಕುವ ಮೂಲಕ ಸರಣಿ ಸಮಬಲ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ, ಯಶಸ್ವಿ ಜೈಸ್ವಾಲ್ 60(41ಎಸೆತ) ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 12, ತಿಲಕ್ ವರ್ಮ ಶೂನ್ಯಕ್ಕೆ ಔಟಾದರು. ಅಮೋಘ ಆಟವಾಡಿ ಅಬ್ಬರಿಸಿದ ಸೂರ್ಯ 56 ಎಸೆತಗಳಲ್ಲಿ100 ರನ್ ಪೂರ್ಣ ಗಳಿಸಿ ಔಟಾದರು. 7 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸಿಡಿಸಿದರು. ರಿಂಕು ಸಿಂಗ್ 14 ರನ್ ಗಳಿಸಿ ಔಟಾದರು.
ಅಂತಿಮವಾಗಿ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ 202 ರನ್ ಗಳ ಸವಾಲು ನೀಡಿತು.
ಕೇಶವ ಮಹಾರಾಜ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು. ನಾಂದ್ರೆ ಬರ್ಗರ್,ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.
ಈ ಬೃಹತ್ ಮೊತ್ತ ಚೇಸ್ ಮಾಡಲು ಮುಂದಾದ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತ ಅನುಭವಿಸಿದರು. ರೀಜಾ ಹೆಂಡ್ರಿಕ್ಸ್ 8, ಮ್ಯಾಥ್ಯ ಬ್ರಿಟ್ಟಿ 4 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಾಯಕ ಮರ್ಕ್ರಂ 25, ಡೇವಿಡ್ ಮಿಲ್ಲರ್ 35 ತಂಡಕ್ಕೆ ಚೇತರಿಕೆ ನೀಡಲು ಹೊರಟರು. ಆದ್ರೆ ಅವರ ಪ್ರಯತ್ನ ವಿಫಲವಾಯಿತು. ಭಾರತ ತಂಡದ ಬಿಗಿ ಬೌಲಿಂಗ್ ದಾಳಿ ಮುಂದೆ ಮಂಕಾದ ಹರಿಣಗಳು 13.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 95 ರನ್ ಗಳಿಸಿ 106ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿದೆ.
ಭಾರತ ಪರ ಕುಲದೀಪ್ ಯಾದವ್ 2.5 ಓವರ್ ಮಾಡಿ ಕೇವಲ 17 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದರು. ಆಲ್ ರೌಂಡರ್ ಜಡೇಜಾ 2 ವಿಕೆಟ್ ಪಡೆದು ಗಮನ ಸೆಳೆದರು.
ಪಂದ್ಯ ಶ್ರೇಷ್ಠ: ಸೂರ್ಯ ಕುಮಾರ್ ಯಾದವ್
ಸರಣಿ ಶ್ರೇಷ್ಠ: ಸೂರ್ಯ ಕುಮಾರ್ ಯಾದವ್