ಏಕದಿನ ವಿಶ್ವಕಪ್ ಮುಗಿದ ಬಳಿಕ ತವರು ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಿ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು ಹರಿಣಗಳ ವಿರುದ್ಧ 3 ಪಂದ್ಯಗಳ ಟಿ 20 ಸರಣಿ, 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ.
ಇಂದು ( ಡಿಸೆಂಬರ್ 10 ) ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಡರ್ಬನ್‌ನ ಕಿಂಗ್ಸ್‌ಮೆಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಥಮ ಟಿ 20 ಪಂದ್ಯವನ್ನಾಡಲಿವೆ. ಈ ಟಿ 20 ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ನಾಯಕನಾಗಿ ಮುನ್ನಡೆಸಲಿದ್ದು, ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಯುವ ಭಾರತ ತಂಡವೇ ಈ ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಪಂದ್ಯ ಎಷ್ಟು ಗಂಟೆಗೆ ಶುರುವಾಗಲಿದೆ, ನೇರಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ, ಇತ್ತಂಡಗಳ ನಡುವಿನ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಯಾವ ತಂಡ ಬಲಿಷ್ಠ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಈ ಪಂದ್ಯ ಸಂಜೆ 7.30ಕ್ಕೆ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ ಹಾಗೂ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಓಟಿಟಿಯಲ್ಲೂ ಲಭ್ಯವಿದೆ. ಎರಡೂ ತಂಡಗಳು ಇಲ್ಲಿಯವರೆಗೂ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ, ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಉಳಿದೊಂದು ಪಂದ್ಯ ಯಾವುದೇ ಫಲಿತಾಂಶದಲ್ಲಿ ಅಂತ್ಯಗೊಂಡಿದೆ. ಡರ್ಬನ್‌ನ ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೂ ನಡೆದಿರುವ ಯಾವುದೇ ಟಿ ಟ್ವೆಂಟಿ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಸೋಲದಿರುವ ಇತಿಹಾಸ ಹೊಂದಿದೆ.





