ಯಶ್ 19 ಸತತವಾಗಿ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಟಾಪಿಕ್. ಕೆಜಿಎಫ್ ಚಿತ್ರ ಸರಣಿಯ ಬಳಿಕ ಕಥೆ ಆರಿಸಿಕೊಳ್ಳುವಲ್ಲಿ ತೀರ ನಿಗಾ ವಹಿಸಿದ ಯಶ್ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಹಲವಾರು ನಿರ್ದೇಶಕರ ಹೆಸರು ಕೇಳಿ ಬಂದಿತ್ತು. ಇದೀಗ ಇಂದು ( ಡಿಸೆಂಬರ್ 8 ) ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಯಶ್ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಹಾಗೂ ಈ ಸಿನಿಮಾದ ಹೆಸರೇನು ಎಂಬುದು ಹೊರಬಿದ್ದಿದೆ.
ಯಶ್ ಮಲಯಾಳಂನ ಮಾಜಿ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್ ಜತೆ ತನ್ನ ಮುಂದಿನ ಚಿತ್ರವನ್ನು ಮಾಡುತ್ತಿದ್ದಾರೆ. ಲಯರ್ಸ್ ಡೈಸ್ ಎಂಬ ಹಿಂದಿ ಚಿತ್ರ ಹಾಗೂ ಮುತ್ತೂನ್ ಎಂಬ ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಗೀತು ಮೋಹನ್‌ದಾಸ್ ಇದೀಗ ತಮ್ಮ ಮೂರನೇ ಚಿತ್ರವನ್ನು ಯಶ್‌ಗೆ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ʼಟಾಕ್ಸಿಕ್ʼ ಎಂದು ಹೆಸರಿಡಲಾಗಿದೆ.
ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ ಬಂಡವಾಳ ಹೂಡಿದೆ. ಚಿತ್ರ 2025ರ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.