Mysore
28
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಮೈಸೂರನ್ನು “ಭಿಕ್ಷುಕ ವೃತ್ತಿ ಮುಕ್ತ” ನಗರವಾಗಿಸಲು ಹೊಸ ಯೋಜನೆ ಸದ್ಯದಲ್ಲೇ ಜಾರಿ!

ಬೆಂಗಳೂರು : ಭಿಕ್ಷಾಟನೆಯಲ್ಲಿ ತೊಡಗಿರುವವರ ಕಲ್ಯಾಣ ಕಾರ್ಯಕ್ರಮ ಹಾಗೂ ಪುನರ್ವಸತಿ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಮೈಸೂರು ನಗರವನ್ನು ಭಿಕ್ಷಾಟನೆ ವೃತ್ತಿ ಮುಕ್ತ ನಗರವನ್ನಾಗಿಸಲು ರಾಜ್ಯ ಸರ್ಕಾರ ಸದ್ಯದಲ್ಲೇ ‘ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ’ (SMILE- Beggary Scheme) ಎಂಬ ಸ್ಟೈಲ್ ಭಿಕ್ಷುಕ ಯೋಜನೆಯನ್ನು ಜಾರಿಗೆ ತರಲು ಪೂರ್ವಸಿದ್ಧತೆ ಕೈಗೊಂಡಿದೆ.

ʼಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿʼ ಉಪಯೋಜನೆಯನ್ನು ರೂಪಿಸಿದ್ದು, ಆ ಮೂಲಕ ಭಿಕ್ಷುಕ ವೃತ್ತಿಯಲ್ಲಿ ತೊಡಗಿರುವವರ ರಕ್ಷಣೆ ಮತ್ತು ಪುನರ್ವಸತಿಯಲ್ಲಿ ಪ್ರಮುಖ ಗಮನವನ್ನು ಹೊಂದಿದೆ. ಇದರಿಂದಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ “ಸ್ಟೈಲ್ ಉಪಯೋಜನೆಯಡಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ ಉಪಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ದೇಶಾದ್ಯಂತ 30 ನಗರಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಮೈಸೂರು ನಗರವನ್ನು ಆಯ್ಕೆ ಮಾಡಲಾಗಿದೆ. 30 ನಗರಗಳ ಪೈಕಿ 10 ದೇವಸ್ಥಾನಗಳು ಹೆಚ್ಚಾಗಿರುವ ನಗರಗಳು, 10 ಪ್ರವಾಸೋದ್ಯಮ ಹೆಚ್ಚಾಗಿರುವ ನಗರಗಳು ಮತ್ತು 10 ಐತಿಹಾಸಿಕ ನಗರಗಳನ್ನು ವಿಭಾಗ ಮಾಡಿದೆ. ಅಂತಹ ನಗರಗಳಲ್ಲಿ ಪ್ರಾರಂಭವಾಗಿ ಈ ಯೋಜನೆಯನ್ನು ಜಾರಿಗೆ ತಂದು ನಂತರ ದೇಶಾದ್ಯಂತ ಈ ಸ್ಟೈಲ್ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸಿ ಭಾರತವನ್ನು “ಭಿಕ್ಷಾ ವೃತ್ತಿ ಮುಕ್ತ’ವನ್ನಾಗಿಸುವ ಗುರಿಯನ್ನು ಹೊಂದಿದೆ.

ವಿವಿಧ ಇಲಾಖೆ- ಸಂಘ ಸಂಸ್ಥೆಗಳು, ಯೋಜನೆಗಳ ಸಮ್ಮಿಲನ : ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಇದೇ ರೀತಿಯ ಯೋಜನೆಗಳಾದ ನಗರ ಆಶ್ರಯ ಮನೆಗಳ ಯೋಜನೆ (DAY-NULM), ವಿವಿಧ ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಏಜನ್ಸಿಗಳನ್ನು ಈ ಯೋಜನೆಯಡಿ ಭಾಗಿಯಾಗುವಂತೆ ಕ್ರಮ ಕೈಗೊಳ್ಳಲಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ISEC) ಯೊಂದಿಗೆ ಸಮಾಜ ಕಲ್ಯಾಣ ಇಲಾಖೆ ಒಡಂಬಡಿಕೆ ಮಾಡಿಕೊಳ್ಳಲಿದೆ. ನಂತರ ಸರ್ಕಾರದ ಒಪ್ಪಿಗೆ ಬಳಿಕ ಐತಿಹಾಸಿಕ ನಗರಿ ಮೈಸೂರಿನಲ್ಲಿ ಐಸೆಕ್ ಸಂಸ್ಥೆ ಭಿಕ್ಷುಕರ ಬಗ್ಗೆ ಸಮೀಕ್ಷೆ ಕೈಗೊಂಡು ಅದರ ವರದಿ ಆಧಾರದ ಮೇಲೆ ಸರ್ಕಾರ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಬಳಕ ಆ ಯೋಜನೆಯನ್ನು ಜಾರಿ ಮಾಡಲಿದೆ.

ಸ್ಟೈಲ್ ಯೋಜನೆಯು ನಿರಂತರ ಪ್ರಕ್ರಿಯೆಯಾಗಿದ್ದು, ಈ ಯೋಜನೆಯಡಿ ಭಿಕ್ಷೆ ಬೇಡುತ್ತಿರುವವರನ್ನು ಗುರ್ತಿಸಿ ಅವರಿಗೆ ಪುರ್ವಸತಿ, ವೈದ್ಯಕೀಯ ನೆರವು, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಅವರನ್ನು ಸಶಕ್ತಗೊಳಿಸಿ ಭಿಕ್ಷಾ ವೃತ್ತಿಯಿಂದ ಹೊರಗೆತಂದು ಸಮಾಜದ ಮುಖ್ಯವಾಹಿಸಿಯಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸಲು ಸಜ್ಜುಗೊಳಿಸುವ ಉದ್ದೇಶವನ್ನು ಸ್ಟೈಲ್ ಯೋಜನೆ ಹೊಂದಿದೆ.

ಸ್ಟೈಲ್ ಯೋಜನೆ ಜಾರಿ ಹೇಗೆ? : ಇದರ ಜೊತೆಗೆ ಪರಿಣಾಮಕಾರಿಯಾಗಿ ಜನರದಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕ ವಿಧಾನ ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವುದು. ಯೋಜನಾ ವೆಚ್ಚದ ಶೇ.30ರಷ್ಟು ಅನುದಾನವನ್ನು ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಬಿಡುಗಡೆ ಮಾಡಲಿದೆ. ವಿಶ್ವವಿಖ್ಯಾತ ದಸರಾದಿಂದ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಮೈಸೂರು ರಾಜ್ಯದಲ್ಲೇ ಮೊದಲ ಬಾರಿಗೆ ಭಿಕ್ಷುಕರ ಮುಕ್ತ ನಗರವಾಗಿ ಬದಲಾಗಲು ಸ್ಥಳೀಯ ನಾಗರೀಕರು, ಸಂಘ ಸಂಸ್ಥೆಗಳ ಸಹಾಯ, ಸಹಕಾರವು ಅಗತ್ಯವಿದೆ.

ಭಿಕ್ಷುಕರಿಗೆ ಪುನರ್ವಸತಿ ಜೊತೆಗೆ ಹೈಟೆಕ್ ಟ್ರೈನಿಂಗ್ : ಮೈಸೂರಿನಲ್ಲಿ ಅಂದಾಜು 500 ಭಿಕ್ಷುಕರಿರಬಹುದು. ಈ ಪ್ರವಾಸೋದ್ಯಮ ನಗರವನ್ನು “ಭಿಕ್ಷುಕ ವೃತ್ತಿ ಮುಕ್ತ ನಗರ” ವಾಗಿ ಮಾಡಲು ಕೇಂದ್ರ ಪರಿಹಾರ ಸಮಿತಿ ಕ್ರಮ ಕೈಗೊಳ್ಳಲಿದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಮೆಕಾನಿಕ್, ದ್ರೋಣ್ ತರಬೇತಿ, ಫೊಟೊಗ್ರಫಿ, ಕಂಪ್ಯೂಟರ್ ಕಲಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಹೊಂದಿದ ಕೌಶಲ್ಯಗಳ ತರಬೇತಿಗಾಗಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರು ತಿಂಗಳಲ್ಲಿ ತರಬೇತಿ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಸ್ಟೈಲ್ ಯೋಜನೆ ಅನುಷ್ಠಾನಕ್ಕೆ 5 ಕೋಟಿ ರೂ. ಹಣವನ್ನು ಹೆಚ್ಚುವರಿ ತರಬೇತಿ, ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕಕ್ಕಾಗಿ ಬಳಸಿಕೊಳ್ಳಲು, ಯೋಜನೆ ಕುರಿತಂತೆ ಜನಜಾಗೃತಿ ಮೂಡಿಸಲು, ಭಿಕ್ಷುಕರನ್ನು ಕರೆತರಲು ಹೆಚ್ಚುವರಿ ವಾಹನಗಳ ಬಳಕೆ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅಧಿಕಾರಿಗಳಿಗೆ ಇತ್ತೀಚೆಗೆ ಕೇಂದ್ರ ಪರಿಹಾರ ಸಮಿತಿ ಸಭೆಯೊಂದರಲ್ಲಿ ಸೂಚನೆ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!