Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆಂಧ್ರದಲ್ಲೂ ಮಿಚಾಂಗ್‌ ಚಂಡಮಾರುತದ ಅಬ್ಬರ; ತಿರುಪತಿ ವಿಮಾನಗಳು ರದ್ದು, ಮಳೆಗೆ ತತ್ತರಿಸಿದ ಜನತೆ

ಕಳೆದ ಐದಾರು ದಿನಗಳಿಂದ ಮಿಚಾಂಗ್‌ ಚಂಡಮಾರುತ ತಮಿಳುನಾಡಿನಲ್ಲಿ ಜನಜೀವನವನ್ನು ಅಸ್ತವ್ಯಸ್ತಗವಾಗುವಂತೆ ಮಾಡಿದೆ. ಅದರಲ್ಲಿಯೂ ಸಮುದ್ರ ತೀರದಲ್ಲಿರುವ ಚೆನ್ನೈ ನಗರದ ಮೇಲೆ ಮಿಚಾಂಗ್‌ ಪರಿಣಾಮ ದೊಡ್ಡ ಮಟ್ಟದಲ್ಲಿದ್ದು, ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಚೆನ್ನೈ ನಗರದ ಹಲವು ಪ್ರದೇಶಗಳಲ್ಲಿ ನೀರು ನದಿಯ ಹಾಗೆ ಹರಿಯುತ್ತಿರುವ ಹಾಗೂ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಹೀಗೆ ಚೆನ್ನ ನಗರವನ್ನು ನರಳುವ ಹಾಗೆ ಮಾಡಿರುವ ಮಿಚಾಂಗ್‌ ಚಂಡಮಾರುತ ಇದೀಗ ಆಂಧ್ರ ಪ್ರದೇಶದ ಕಡೆ ಮುಖ ಮಾಡಿದ್ದು ಕರಾವಳಿ ಭಾಗ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಾಂತರ ಉಂಟುಮಾಡಿದೆ. ತಿರುಪತಿ ನಗರದಲ್ಲಿ ಮಿಚಾಂಗ್‌ ಚಂಡಮಾರುತದಿಂದಾಗಿ ದೊಡ್ಡ ಪ್ರಮಾಣದಲ್ಲಿ ಮಳೆ ಉಂಟಾಗಿದ್ದು ಪರಿಣಾಮ ನಿನ್ನೆ ( ಡಿಸೆಂಬರ್‌ 4 ) ಒಟ್ಟು 16 ವಿಮಾನಗಳು ರದ್ದಾಗಿವೆ.

ಹೌದು, ಆಂಧ್ರ ಪ್ರದೇಶದ ರೇಣಿಗುಂಟ ವಿಮಾನ ನಿಲ್ದಾಣದಿಂದ ನಿನ್ನೆ ಹಾರಬೇಕಿದ್ದ 16 ವಿಮಾನಗಳು ತೀವ್ರ ಮಳೆ ಹಾಗೂ ಮಾರುತದ ಕಾರಣದಿಂದಾಗಿ ರದ್ದಾಗಿವೆ. ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೂ ಬರುವ ಮುನ್ನ ತಾವು ಪ್ರಯಾಣಿಸಲಿರುವ ವಿಮಾನದ ಸ್ಟೇಟಸ್‌ ಅನ್ನು ಚೆಕ್‌ ಮಾಡಿಕೊಂಡು ಬರತಕ್ಕದ್ದು ಎಂದು ಸೂಚನೆಯನ್ನೂ ಸಹ ನೀಡಿದೆ.

ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿರುವ ಮಿಚಾಂಗ್‌ ಚಂಡಮಾರುತದ ವೇಗ ಗಂಟೆಗೆ 90 – 100 ಕಿಲೋಮೀಟರ್‌ ಇದ್ದು, ಇದರ ವೇಗ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಸೋಮವಾರ ನಿರಂತರವಾಗಿ ತಿರುಪತಿ ನಗರದಲ್ಲಿ ಮಳೆ ಸುರಿದಿದ್ದು, ತಿರುಪತಿ ಜಿಲ್ಲೆಯಲ್ಲಿನ ಎಲ್ಲಾ 5 ನದಿಗಳು ತುಂಬಿಹರಿಯುತ್ತಿವೆ.

ತಿರುಪತಿ ಮಾತ್ರವಲ್ಲದೇ ಮಚಲಿಪಟ್ಟಣಂ, ಪಶ್ಚಿಮ ಗೋದಾವರಿ, ಕಾಕಿನಾಡ ಹಾಗೂ ನೆಲ್ಲೂರು ಜಿಲ್ಲೆಗಳಲ್ಲಿಯೂ ಮಿಚಾಂಗ್‌ ಪರಿಣಾಮ ತೀವ್ರವಾಗಿ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಕೆಲವೆಡೆ ಭೂಕುಸಿತವೂ ಸಹ ಉಂಟಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ