ಕಲಬುರಗಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ಕೊಡುವುದು ತುಂಬಾ ಬೇಗ ಎನಿಸುತ್ತದೆ. ಆದರೆ ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ನಾವು ಮ್ಯಾಜಿಕ್ ನಂಬರ್ ಕ್ರಾಸ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಬಿಆರ್‌ಎಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ ಇತ್ತು. ಸ್ವತಃ ನಾನೆ ಇದ್ದು ನೋಡಿದ್ದೇನೆ. ಕಾಲೇಶ್ವರಂ ನೀರಾವರಿ ಯೋಜನೆ ಒಂದರಲ್ಲಿಯೇ ಒಂದುವರೆ ಲಕ್ಷ ಕೋಟಿ ರೂ.ಹಗರಣ ಆಗಿದೆ ಅಂತ ಹೇಳ್ತಿದಾರೆ.
ಹೀಗೆ 10 ಸ್ಕ್ಯಾಮ್ ನಲ್ಲಿ ಹತ್ತು ಲಕ್ಷ ಕೋಟಿ ಹಣ ಹಗರಣ ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಯಾವುದೇ ರೀತಿಯ ಉದ್ಯೋಗ ಸೃಷ್ಟಿ ಆಗಿರಲಿಲ್ಲ, ಯುವಕರು ಆಕ್ರೋಶಗೊಂಡಿದ್ದರು. ಈ ಎಲ್ಲ ಕಾರಣಕ್ಕಾಗಿ ಜನ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಿ ಸ್ವಲ್ಪ ಹಿನ್ನಡೆ ಅನಿಸುತ್ತಿದೆ ಆದರೂ ಫೈನಲ್ ವರೆಗೂ ಅದನ್ನೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ. ಯಾವ ಆಪರೇಷನ್ ಭಯ ಇಲ್ಲ. ಆದ್ರೆ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಿದೆ. ಬಿಜೆಪಿ ಅವರು ತೋಳ್ಬಲ, ಹಣ ಬಲ, ಸಿಬಿಐ, ಇಡಿ ಬಳಕೆ ಮಾಡ್ತಾರೆ, ಹೀಗಾಗಿ ನಮ್ಮ ಶಾಸಕರನ್ನ ನಾವು ಸೇಫ್ ಆಗಿ ಇಟ್ಟುಕೊಳ್ಳಬೇಕಿದೆ ಎಂದರು.