ಏಕದಿನ ವಿಶ್ವಕಪ್ ಬೆನ್ನಲ್ಲೇ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲಿಗೆ ನಡೆದ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದಿದ್ದ ನ್ಯೂಜಿಲೆಂಡ್ ಇದೀಗ ಮೊದಲನೇ ಟೆಸ್ಟ್‌ನಲ್ಲಿ ಸೋಲುವ ಮೂಲಕ ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸೋತ ಮುಖಭಂಗಕ್ಕೊಳಗಾಗಿದೆ.
ಹೌದು, ಬಾಂಗ್ಲಾದೇಶದ ಸಿಲ್ಹೆಟ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 150 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಬಾಂಗ್ಲಾದೇಶ ನೂತನ ಇತಿಹಾಸ ನಿರ್ಮಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 310 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಅತ್ತ ನ್ಯೂಜಿಲೆಂಡ್ 317 ರನ್ ಕಲೆಹಾಕಿ ಆಲ್‌ಔಟ್ ಆಗಿ ಕೇವಲ 7 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 338 ರನ್ ಗಳಿಸಿದ ಬಾಂಗ್ಲಾದೇಶ ಆಲ್‌ಔಟ್ ಆಗಿ ಎದುರಾಳಿ ನ್ಯೂಜಿಲೆಂಡ್‌ಗೆ 332 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ನ್ಯೂಜಿಲೆಂಡ್ ಕೇವಲ 181 ರನ್‌ಗಳಿಗೆ ಆಲ್‌ಔಟ್ ಆಗಿ ಹೀನಾಯ ಸೋಲನ್ನು ಕಂಡು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾ ವಿರುದ್ಧ ಮಂಡಿಯೂರಿತ್ತು.
ಬಾಂಗ್ಲಾದೇಶದ ಪರ ಮೊದಲ ಇನ್ನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಕಾರಣಕರ್ತ ಎನಿಸಿಕೊಂಡ ತೈಜುಲ್ ಇಸ್ಲಾಂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.