Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಎಚ್ಐವಿ ಸೋಂಕಿತರನ್ನು ಸಮಾಜ ನೋಡುವ ರೀತಿ ಬದಲಾಗಿದೆ: ಶಾಸಕ ಶ್ರೀವತ್ಸ

ಮೈಸೂರು: ಈ ಹಿಂದೆ ಸಮಾಜದೊಳಗೆ ಹೆಚ್ಐವಿ ಸೋಂಕಿತರನ್ನು ನೋಡುವ ರೀತಿ ಹಾಗೂ ಅವರ ಜೊತೆ ವರ್ತಿಸುವ ರೀತಿ ಬೇರೆಯೇ ಆಗಿತ್ತು. ಕಾಲ ಕಳೆದಂತೆ ಸಮಾಜದಲ್ಲಿ ಅರಿವು ಹೆಚ್ಚಾಗಿ, ಹೆಚ್ಐವಿ ಸೋಂಕಿತರನ್ನು ಸಾಮಾನ್ಯರಂತೆ ಪರಿಗಣಿಸಲಾಗುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆಯಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮೈಸೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ, ಆಶಾ ಕಿರಣ, ಆನಂದ ಜ್ಯೋತಿ ಪಾಸಿಟೀವ್ ನೆಟ್ವರ್ಕ್, ಆಶೋದಯ ಸಮಿತಿ, ಎಸ್‌ವಿವೈಎಂ ಮೈಸೂರು, ಎಲ್ ಡಬ್ಲ್ಯೂಎಸ್‌ ಗಾರ್ಡ್ ಸಂಸ್ಥೆ, ಮಹಾನ್ ಐ ಎಂ ಎ ಮೈಸೂರು ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜೆಕೆ ಗ್ರೌಂಡ್ ನ ಅಮೃತ ಮಹೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಹೆಚ್ಚಾಗಿ ಸೋಂಕಿಗೆ ಒಳಗಾದರೆ ಕೀಳರಿಮೆ ಹಾಗೂ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಸರ್ಕಾರ ಹಾಗೂ ಇತರೆ ಸ್ವಯಂಸೇವಾ ಸಂಸ್ಥೆಗಳ ಅರಿವಿನ ಕಾರ್ಯಕ್ರಮಗಳು, ಆತ್ಮಸ್ಥೈರ್ಯ ತುಂಬುವ ಚಟುವಟಿಕೆಗಳು ಎಚ್ಐವಿ ಸೋಂಕಿಗೆ ಒಳಗಾದ ರೋಗಿಗಳ ಮನಸ್ಥಿತಿಯನ್ನು ಬದಲಿಸಿವೆ ಎಂದರು.

ಎಷ್ಟೋ ಬಾರಿ ಅವರದಲ್ಲದ ತಪ್ಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹೆಚ್ಐವಿ ಸೋಂಕಿಗೆ ಒಳಗಾಗಿರುತ್ತಾರೆ. ಅಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನು ನಾವು ಸ್ಮರಿಸಲೇಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಆರೋಗ್ಯ ಇಲಾಖೆ ಕೆಲಸ ಮಾಡಿದೆ. ಎಚ್ಐವಿ ಸೋಂಕಿತರು, ಅವರ ಪರವಾಗಿ ಕೆಲಸ ಮಾಡುವ ಸ್ವಯಂಸೇವಕರು ಸ್ವಯಂ ಸೇವಾ ಸಂಸ್ಥೆಗಳ ಮನವಿಗಳೇನಾದರೂ ಇದ್ದಲ್ಲಿ ಅವುಗಳನ್ನು ಸಲ್ಲಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಾನು ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಮ್ ಗಾಯತ್ರಿ ಮಾತನಾಡಿ, ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. 1986ರಲ್ಲಿ ಕಾಣಿಸಿಕೊಂಡ ಈ ಸೋಂಕಿನ ಬಗ್ಗೆ ಮುಕ್ತವಾಗಿ ಮಾತನಾಡಲು ಎಲ್ಲರೂ ಸಂಕೋಚ ಪಡುತ್ತಿದ್ದರು. ಹಲವಾರು ಅರಿವಿನ ಕಾರ್ಯಕ್ರಮಗಳು ಕಾರ್ಯಗಾರಗಳ ಪರಿಣಾಮದಿಂದಾಗಿ ಈ ದಿನ ಸೋಂಕಿನ ಕುರಿತು, ಸೋಂಕಿತರ ಪರವಾಗಿ ಮುಕ್ತವಾಗಿ ಚರ್ಚಿಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆರ್‌ಸಿಎಚ್ ಡಾ.ಜಯಂತ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಮೊಹಮ್ಮದ್ ಸಿರಾಜ್, ಎಆರ್ ಟಿ ಮೆಡಿಕಲ್ ಆಫೀಸರ್ ಗೋವಿಂದರಾಜು, ಚೆಲುವಾಂಬ ಹೆಚ್.ಓ.ಡಿ ಡಾ.ಸುಧಾ, ಜೀವಧಾರ ಬ್ಲಡ್ ಬ್ಯಾಂಕ್ ನ ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ