ಅಹ್ಮದಾಬಾದ್ : ಕರ್ನಾಟಕದ ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯ ಮುಂದೆ ನಲುಗಿದ ಬಿಹಾರ ತಂಡ ವಿಜಯ್ ಹಜಾರೆ ಟೂರ್ನಿಯ ಲೀಗ್ ಪಂದ್ಯದಲ್ಲಿ ಕರ್ನಾಟಕ ಮುಂದೆ ಮಂಡಿಯೂರಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದ ಎ ಗ್ರೌಂಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಹಾರ ನೀಡಿದ 217 ರನ್ ಗುರಿಯನ್ನು ಸರಾಗವಾಗಿ ಬೆನ್ನಟ್ಟಿದ ಕರ್ನಾಟಕ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ ʼಗ್ರೂಪ್ ಸಿʼ ಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಿಹಾರ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 217 ರನ್ ಗಳಿಸಲಷ್ಟೆ ಶಕ್ತರಾದರು. ಆರಂಭಿಕ ಆಘಾತ ಅನುಭವಿಸಿದ ಬಿಹಾರ್ ಅಲೋಕ್ ಕುಮಾರ್ (7) ಬೇಗನೆ ವಿಕೆಟ್ ಕಳೆದುಕೊಂಡರು. ಶರ್ಮನ್ ನಿಗ್ರೋಧ್ 21, ಬಬುಲ್ ಕುಮಾರ್ 17, ಬಿಪಿನ್ ಸೌರಭ್ 8 ರನ್ ಗಳಿಸಿದರು.
ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಸಹಾ ಏಕಾಂಗಿ ಹೋರಾಟ ನಡೆಸಿದ ಸಕಿಬುಲ್ ಗಣಿ ಅವರು ಆಕರ್ಷಕ ಶತಕ ದಾಖಲಿಸಿದರು. 100 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 113 ರನ್ ಗಳಿಸಿ ತಂಡದ ಮೊತ್ತ 200 ಗಡಿ ದಾಟಲು ಸಹಕರಿಸಿದರು.
ಕರ್ನಾಟಕ ಪರ ಸುಚಿತ್ 3, ಕಾವೇರಪ್ಪ, ವೈಶಾಕ್ ವಿಜಯ್‌ಕುಮಾರ್ ಮತ್ತು ಆರ್ ಸಮರ್ಥ್ ತಲಾ 1 ವಿಕೆಟ್ ಪಡೆದರು.
ಬಿಹಾರ ನೀಡಿದ 217 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ಕೇವಲ 33.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 218 ಬಾರಿಸುವ ಮೂಲಕ ಸಿ ಗ್ರೂಪ್‌ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿ ಟೇಬಲ್ ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.
ಆರಂಭದಲ್ಲಿ ಆರ್.ಸಮರ್ಥ್(6) ಬೇಗನೆ ಔಟಾದರು. ನಾಯಕ ಮಯಾಕ್ ಅಗರ್ವಾಲ್ (28) ರನ್ ತಂಡಕ್ಕೆ ಕಾಣಿಕೆ ನೀಡಿದರು. ನಿಖಿನ್ ಜೋಸ್ (69) ಮತ್ತು ದೇವ್‌ದತ್ ಪಡಿಕ್ಕಲ್ (93) ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯ್ದರು. ಮನೀಶ್ ಪಾಂಡೆ 17 ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದುಕೊಟ್ಟರು. ಪಡಿಕ್ಕಲ್ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದವು.