Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸುಖೀರಾಮ್ ಎಂಬ ನಾಯಿ ಪ್ರೀತಿಯ ಮುಂಬೈಯ ಶ್ರೀಸಾಮಾನ್ಯ

ಮುಂಬೈಯ ನರಿಮನ್ ಪಾಯಿಂಟ್‌ನಲ್ಲಿರುವ ಮರಿನ್ ಡ್ರೈವ್ ಮುಂಬೈ ಮಾತ್ರವಲ್ಲ ಇಡೀ ದೇಶದಲ್ಲಿ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ದರವಿರುವ ಪ್ರದೇಶಗಳಲ್ಲೊಂದು, ಇಲ್ಲಿ ಒಂದು ಚದರ ಅಡಿ ಜಾಗದ ಬೆಲೆ 50 ಸಾವಿರ ರೂಪಾಯಿಗೂ ಹೆಚ್ಚು! ಏರ್ ಇಂಡಿಯಾ ಕಟ್ಟಡ, ಇಂಡಿಯನ್ ಎಕ್ಸ್‌ಪ್ರೆಸ್ ಬಿಲ್ಲಿಂಗ್, ಎನ್‌ಸಿಪಿಎ, ಒಬೆರಾಯ್ (ಈಗ ಟ್ರೈಡೆಂಟ್) ಹೋಟೆಲ್ ಮೊದಲಾದವು ಇಲ್ಲಿರುವ ಕೆಲವು ಪ್ರಸಿದ್ದ ಕಟ್ಟಡಗಳು. ಮಧ್ಯಾಹ್ನ ಅಥವಾ ಸಂಜೆ ಹೊತ್ತು ಈ ಹೋಟೆಲು ಅಥವಾ ಇಲ್ಲಿನ ಮನೆಗಳ ಬಾಲ್ಕನಿಗಳಲ್ಲಿ ಕುಳಿತು, ನೀಲಿ ಸಮುದ್ರದ ಹಿನ್ನೆಲೆಯಲ್ಲಿ ಎಡೆಬಿಡದೆ ಹಾದು ಹೋಗುವ ವಾಹನಗಳನ್ನು ನೋಡುತ್ತ ಚಹಾ, ಕಾಫಿ ಅಥವಾ ಬಿಯರ್ ಹೀರುವುದೇ ಒಂದು ಆಹ್ಲಾದಕರ ಅನುಭವ ಪ್ರೇಮಿಗಳಿಗಂತೂ ಮರಿನ್ ಡ್ರೈವ್ ಈಡನ್ ಗಾರ್ಡನ್‌ನಂತೆ. ದಿನ ರಾತ್ರಿಯ ಯಾವ ಹೊತ್ತಲ್ಲಿ ನೋಡಿದರೂ ಈ ಲೋಕಕ್ಕೆ ಬೆನ್ನು ಹಾಕಿ ಸಮುದ್ರಕ್ಕೆ ಮುಖ ಮಾಡಿ ದಂಡೆಯುದ್ದಕ್ಕೂ ಒಬ್ಬರಿಗೊಬ್ಬರು ಅಂಟಿಕೊಂಡು ವಿವಿಧ ಭಂಗಿಗಳಲ್ಲಿ ಕುಳಿತ ನೂರಾರು ಜೋಡಿಗಳ ಸಾಲು ಯಾವುದೇ ಇನ್ಸಾಲೇಷನ್ ಕಲಾವಿದನ ಕೃತಿಗಳನ್ನು ನಾಚಿಸುವಂತಿರುತ್ತದೆ.

ಇಂತಹ ಮರಿನ್ ಡ್ರೈವ್‌ನಲ್ಲಿ ಸಮುದ್ರದಿಂದ ಬೀಸುವ ತಾಜಾ ಗಾಳಿಯನ್ನು ಉಸಿರಾಡುತ್ತ ನಡೆದು ಹೋಗುವುದು ಈ ಕಲುಷಿತ ಮಹಾನಗರದಲ್ಲಿ ವಾಸಿಸುವ ಯಾರಿಗಾದರೂ ಒಂದು ಉಚಿತ ಲಕ್ಷುರಿ. ದಿನದ ಯಾವ ಹೊತ್ತಲ್ಲಿ ನೋಡಿದರೂ ನೂರಾರು ಜನ ಹೀಗೆ ನಡೆದು ಹೋಗುವುದನ್ನು ನೋಡಬಹುದು. ಹಾಗೆ ನಡೆದು ಹೋಗುವವರಲ್ಲಿ ಈ ಲೇಖಕನೂ ಒಬ್ಬ. ಎನ್‌ಸಿಪಿಎ ಕಟ್ಟಡವಿರುವ ಜಾಗ ಮರಿನ್ ಡ್ರೈವ್‌ನ ಕೊನೆಯ ನೆಲ ಬಿಂದು. ಅಲ್ಲಿಂದ ಮುಂದಕ್ಕೆ ಹೋಗಲಾಗುವುದಿಲ್ಲ. ಆ ಬಿಂದು ಮುಟ್ಟಿದ ನಂತರ ವಾಪಸ್ ಬರಬೇಕು.

ಒಮ್ಮೆ ಮಧ್ಯಾಹ್ನದ ಹೊತ್ತು ಹೀಗೇ ನಡೆದು ಆಫೀಸಿಗೆ ಹೋಗುತ್ತಿದ್ದಾಗ ಎನ್‌ಸಿಪಿಎ ಕಟ್ಟಡದ ಎದುರಿನ ಫುಟ್‌ಪಾತಲ್ಲಿ ಒಂದು ವಿಶೇಷ ದೃಶ್ಯ ಕಾಣಿಸಿತು. ಸುಮಾರು 60ರ ಆಸುಪಾಸಿನ ತೀರಾ ಸಾಮಾನ್ಯನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಹಳೇ ಸೈಕಲ್ಲಿನಿಂದ ಇಳಿದರು. ಸೈಕಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿ, ಹ್ಯಾಂಡಲಿಗೆ ಸಿಕ್ಕಿಸಿದ ಭಾರವಾದ ಎರಡು ಚೀಲಗಳನ್ನು ಇಳಿಸಿದರು. ಚೀಲಗಳಿಂದ ದೊಡ್ಡ ಗಾತ್ರದ ಎರಡು ಟಿಫಿನ್ ಬಾಕ್ಸ್‌ಗಳನ್ನು ಹೊರಗೆಳೆದರು. ಇನ್ನೊಂದು ಚೀಲದಿಂದ ಐದು ತಟ್ಟೆಗಳನ್ನು ತೆಗೆದು ಫುಟ್‌ ಪಾತಿನ ಮೇಲೆ ಸಾಲಾಗಿ ಇಟ್ಟು, ಅವುಗಳಿಗೆ ಟಿಫಿನ್ ಬಾಕ್ಸಿನಿಂದ ಅನ್ನ ಮತ್ತು ದಾಲ್ ಬಡಿಸಿದರು. ಅದೇ ಕ್ಷಣಕ್ಕೆ, ಅಷ್ಟರ ತನಕ ಎಲ್ಲಿದ್ದವೋ ಏನೋ, ಇದ್ದಕ್ಕಿದ್ದಂತೆ ಐದು ಬೀದಿ ನಾಯಿಗಳು ಬಂದು ಶಿಸ್ತಿನಿಂದ ನಿಂತುಕೊಂಡವು! ಅವುಗಳ ಕುತ್ತಿಗೆಯಲ್ಲಿ ಮುಂಬೈ ಮುನಿಸಿಪಾಲಿಟಿಯ ಪಟ್ಟಿಗಳಿದ್ದವು. ನಾಲಿಗೆ ಹೊರಚಾಚಿಕೊಂಡು ಆ ವ್ಯಕ್ತಿಯ ಆರ್ಡರನ್ನೇ ಕಾಯುತ್ತಿದ್ದವೋ ಎಂಬಂತೆ ಅವುಗಳು ಶಿಸ್ತಿನಿಂದ ನಿಂತಿದ್ದವು. ಒಮ್ಮೆ ಆತ ‘ಹೂಂ, ಕಾವೋ’ ಎಂದು ಆರ್ಡರ್ ಕೊಟ್ಟಿದ್ದೇ ಆ ಐದೂ ನಾಯಿಗಳು ತಮ್ಮ ತಮ್ಮ ತಾಟುಗಳಿಗೆ ಬಾಯಿ ಹಾಕಿ ತಿನ್ನ ತೊಡಗಿದವು!

ನಾಯಿಗಳು ತಿನ್ನುವುದರಲ್ಲಿ ನಿರತವಾಗಿದ್ದಂತೆ ಆತ ಅವುಗಳ ಮೈ ಸವರಿದನು. ಅವುಗಳ ಕಾಲು ಉಗುರುಗಳನ್ನು ಒಂದೊಂದಾಗಿ ಪರೀಕ್ಷಿಸಿದನು. ಮೈಮೇಲೆ ಕೈಯಾಡಿಸಿ ಗಾಯಗಳಿವೆಯೇ ಎಂಬುದನ್ನು ನೋಡಿ, ಗಾಯಗಳಿದ್ದಲ್ಲಿ ಮುಲಾಮು ಹಚ್ಚಿದನು. ಅವುಗಳು ತಾಟಿನಲ್ಲಿದ್ದುದನ್ನು ತಿಂದು ಮುಗಿಸಿದಾಗ ಮತ್ತಷ್ಟು ಸುರುವಿದನು. ತಿನ್ನುವುದು ಮುಗಿದ ನಂತರ ಅವುಗಳಿಗೆ ಕುಡಿಯಲು ನೀರುಸುರುವಿದನು.ಹಾಗೇ ಆತತನ್ನ ಸುತ್ತಮುತ್ತಲಿನ ಬಗ್ಗೆ ಯಾವುದೇ ಲಕ್ಷ ಹರಿಸದೆ ಅವುಗಳೊಂದಿಗೆ ಮಾತಾಡತೊಡಗಿದನು! ಅವುಗಳಲ್ಲಿ ಒಂದೆರಡನ್ನು ಅವುಗಳ ಹೆಸರಿನಿಂದ ಕರೆದು, ‘ತುಂಟಾಟಿಕೆ ಮಾಡಬಾರದು, ಮುಂದಿನ ಬಾರಿ ನಾನು ಬಂದಾಗ ಸಮಯಕ್ಕೆ ಸರಿಯಾಗಿ ಬರಬೇಕು, ಇಲ್ಲವಾದರೆ ನನಗೆ ನನ್ನ ಆಫೀಸ್ ಕೆಲಸಕ್ಕೆ ಹೋಗಲು ತಡವಾಗುತ್ತದೆ’ ಎಂದು ಪ್ರೀತಿಯಿಂದ ಬಯ್ದನು. ಅವುಗಳು ಆತ ಹೇಳಿದ್ದು ತಮಗೆಲ್ಲ ಅರ್ಥವಾಯಿತು ಎಂಬಂತೆ ಕಿವಿ ನಿಗುರಿಸಿ ಅವನನ್ನೇ ನೋಡುತ್ತ ವಿಧೇಯತೆಯಿಂದ ಬಾಲ ಅಲ್ಲಾಡಿಸಿದವು.
ಯಾರೋ ಒಬ್ಬರು ಹತ್ತಿರದಲ್ಲಿ ನಿಂತು ತನ್ನನ್ನು ಗಮನಿಸುತ್ತಿರುವುದು ಆತನ ಗಮನಕ್ಕೆ ಬರುತ್ತಿದ್ದಂತೆ ಆತ ಹಿಂದಿ-ಮರಾಠಿಯಲ್ಲಿ ಕೇಳಿದನು-ಏನು ನೋಡುತ್ತಿದ್ದೀರಿ, ಸಾಹೇಬ್ರೇ? ನಾನು ಎರಡು ದಿನಕ್ಕೊಮ್ಮೆ ಇಲ್ಲಿಗೆ ಬರುತ್ತೇನೆ. ಈ ನನ್ನ ಸ್ನೇಹಿತರಿಗೆ ಸಿಕ್ಕಿ, ಅವರೊಂದಿಗೆ ಒಂದಷ್ಟು ಹೊತ್ತು ಕಳೆದು ಹೋಗುತ್ತೇನೆ’ ಎಂದು ಆತನೇ ಮಾತು ಶುರು ಮಾಡಿದನು.

ಅದಕ್ಕೆ ಪ್ರತಿಯಾಗಿ ಏನು ಮಾತಾಡಬೇಕು ಎಂದು ತಕ್ಷಣಕ್ಕೆ ಹೊಳೆಯದೆ ನಾನು, ‘ನೀವು ಇಲ್ಲಿಗೆ ದಿನಾ ಬರುತ್ತೀರಾ? ಯಾವಾಗಿನಿಂದ ಬರುತ್ತೀದ್ದೀರಿ? ಈ ನಾಯಿಗಳು ನಿಮಗೆ ಕಚ್ಚುವುದಿಲ್ಲವೇ? ನಿಮಗೆ ಹೆದರಿಕೆ ಆಗುವುದಿಲ್ಲವೇ?’ ಎಂದು ಕೇಳಿದೆ. ನಾನು ಕೇಳಿದ್ದು ಆತನಿಗೆ ಬಾಲಿಶವಾಗಿ ಕಂಡಿತೋ ಏನೋ, ಆತ ನಗಾಡುತ್ತ ಹೇಳಿದ-‘ಸಾಹೇಬ್ರೇ, ಇವುಗಳು ನನ್ನ ಸ್ನೇಹಿತರು. ಇವರು ಮನುಷ್ಯರಂತೆ ಅನ್ನ ಹಾಕಿದ ಕೈಗಳನ್ನು ಕಚ್ಚುವವರಲ್ಲ. ನಾನು ಹಾಕಿದ ಬರೀ ಈ ದಾಲ್ ಚಾವಲ್ (ಅನ್ನ ದಾಲ್) ತಿಂದು, ಅವುಗಳ ಮುಖದಲ್ಲಿ ಎಂತಹ ಸಂತೃಪ್ತಿ ತೋರುತ್ತಿದೆ ನೋಡಿ. (ಹತ್ತಿರದಲ್ಲಿರುವ ಒಬೆರಾಯ್ ಹೋಟೆಲ್ ತೋರಿಸುತ್ತ) ಆ ಸ್ಟಾರ್ ಹೋಟೆಲಲ್ಲಿ ಜನ ಸಾವಿರಾರು ರೂಪಾಯಿ ಕೊಟ್ಟು ಊಟ ಮಾಡಿ, ತಟ್ಟೆಯಲ್ಲಿ ಬಿಟ್ಟು ಹೋಗುವ ಆಹಾರದಲ್ಲಿ ಅರ್ಧ ಮುಂಬೈಗರ ಹೊಟ್ಟೆ ತುಂಬಿಸಬಹುದು. ಆದರೂ ಅವರ ಮುಖದಲ್ಲಿ ಈ ಸಂತೃಪ್ತಿ ಕಾಣಿಸುತ್ತದೆಯೇ?’ ಎಂದು ನನ್ನನ್ನೇ ಕೇಳಿದನು.

ನನ್ನ ಉತ್ತರಕ್ಕೂ ಕಾಯದೆ ಆತನೇ ಮುಂದುವರಿಸಿದನು-ಇವ ನೋಡಿ, ಕಪ್ಪು ಕೂದಲಿನವ. ಇವನ ಹೆಸರು ‘ಕಾಲು’. ಇವನಿಗೆ ಉದ್ದುದ್ದ ಕೂದಲು ಇತ್ತು. ಈ ಸೆಖೆಯಲ್ಲಿ ಅದರಿಂದಾಗಿ ಇವನಿಗೆ ಬಹಳ ಕಿರಿಕಿರಿಯಾಗುತ್ತಿತ್ತು. ಬಿಎಮ್‌ಯ ಡಾಗ್ ಸ್ಟಾಡ್‌ನವರಿಗೆ ಹೇಳಿ, ಮೊನ್ನೆ ಅವನ ಉದ್ದ ಕೂದಲನ್ನೆಲ್ಲ ಕತ್ತರಿಸಿ, ಟ್ರಿಮ್ ಮಾಡಿಸಿದನಂತರ ಈಗ ಎಷ್ಟು ನಿರಾಳವಾಗಿದ್ದಾನೆ ನೋಡಿ. ಬಿಎಮ್‌ಸಿಯವರೇ ಇವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ, ಗುರುತಿಗೆ ಇವುಗಳ ಕಿವಿಯ ಚಿಕ್ಕದೊಂದು ತುಂಡು ಕತ್ತರಿಸಿ, ಕೊರಳಿಗೆ ಪಟ್ಟಿ ಹಾಕಿ ನಂಬರ್ ಕೊಟ್ಟಿದ್ದಾರೆ. ಸಂತಾನಹರಣ ಚಿಕಿತ್ಸೆ ಮಾಡಿಸಿದ್ದರಿಂದ ಸಿಟಿಯಲ್ಲಿ ಇವುಗಳ ನಂಬರ್ ಹೆಚ್ಚುವುದಿಲ್ಲ. ಪಾಪ! ಇವುಗಳ ನಂಬರ್ ಹೆಚ್ಚಿದರೆ ಜನರಿಗೆ ಕಿರುಕುಳ ಅಲ್ಲವೇ! ಅವರು ಬೇಕಾದರೆ ತಮ್ಮ ಮನೆಯಲ್ಲಿ ಪೆಡಿಗ್ರಿ ನಾಯಿಗಳನ್ನು ಸಾಕಿ, ವಾಕಿಂಗ್ ಕರೆದುಕೊಂಡು ಹೋಗಿ, ಅವುಗಳು ದಾರಿಯಲ್ಲೆಲ್ಲ ಹೇಲು ಉಚ್ಚೆ ಮಾಡಿದರೆ ಅಂದರಿಂದ ಯಾರಿಗೂ
ತೊಂದರೆಯಾಗದು!’

“ನಿಮ್ಮ ಹೆಸರೇನು? ನೀವು ಎಲ್ಲಿರುತ್ತೀರಿ?’
ಜನ ನನ್ನನ್ನು ‘ಡಾಗಿ ಬ್ರೌನ್’ ಅಂತ ಕರೆಯುತ್ತಾರೆ. ನನ್ನ ನಿಜವಾದ ಹೆಸರು ಸುಖೀರಾಮ್ ಅಂತ. ನಾನಿರುವುದು ಇಲ್ಲಿಂದ ಹತ್ತು ಕಿ.ಮೀ. ದೂರದಲ್ಲಿ. ನಾನು, ಹೆಂಡತಿ, ಮಗ ಮತ್ತು ಈ ನಾಯಿಗಳು. ಇದು ನನ್ನ ಕುಟುಂಬ. ನನ್ನ ಹೆಂಡತಿ ಇವುಗಳಿಗೆ ಅಡುಗೆ ಮಾಡಿ, ಟಿಫಿನ್ ಡಬ್ಬಿಗಳಲ್ಲಿ ಹಾಕಿ ಕೊಡುತ್ತಾಳೆ. ನಾನು ತಂದು ಇವುಗಳಿಗೆ ಉಣ್ಣಿಸುತ್ತೇನೆ. ನಾನು ಎರಡು ದಿನಕ್ಕೊಮ್ಮೆ ಇಲ್ಲಿಗೆ ಬರುತ್ತೇನೆ. ನನ್ನ ಆಫೀಸ್ ಕೆಲಸದಿಂದಾಗಿ ದಿನಾ ಬರಲು ಆಗುವುದಿಲ್ಲ. ನನ್ನ ಮತ್ತು ನನ್ನ ಕುಟುಂಬದ, ಇವುಗಳನ್ನೂ ಸೇರಿ, ಹೊಟ್ಟೆಯ ಪಾಡನ್ನೂ ನೋಡಿಕೊಳ್ಳಬೇಕಲ್ಲ. ನಾನು ಒಂದು ಚಿಕ್ಕ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ. ಬೇರೆ ದಿನಗಳಲ್ಲಿ ಅವರಿವರು ಕೊಟ್ಟದ್ದನ್ನು ತಿನ್ನುತ್ತವೆ ಅಥವಾ ಇವುಗಳೇ ಎಲ್ಲಾದರೂ ಏನಾದರೂ ಹುಡುಕಿಕೊಳ್ಳುತ್ತವೆ. ಅಂದ ಹಾಗೆ, ‘ನಿಮ್ಮ ಊಟ ಆಯ್ತಾ ಸಾಹೇಬ್ರೇ?’
ಆದರೆ, ಸುಖೀರಾಮ್ ಕೇಳಿದ ಪ್ರಶ್ನೆಗೆ ಯಾಕೋಥಟ್ಟನೆ ಉತ್ತರಿಸಲಾಗಲಿಲ್ಲ. ಸುಮ್ಮನೆ ನಗೆಯೊಂದಿಗೆ ಆತನಿಗೊಂದು ಸಲಾಂ ಹೇಳಿ, ಆಫೀಸಿಗೆ ಬಂದವನಿಗೆ ಆ ಪ್ರಶ್ನೆಯಲ್ಲಿ ವ್ಯಂಗ್ಯ, ಕಾಳಜಿ, ಸೀದಾ ಸಾದಾ ಕುಶಲೋಪರಿ ಏನಿತ್ತು ಎಂಬುದು ಇಂದಿಗೂ ಅರ್ಥವಾಗಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ