ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರು ಮುಖ್ಯಮಂತ್ರಿಗಳ ಮುಂದೆ ತಮ್ಮ ಅಹವಾಲುಗಳನ್ನು ಹೇಳಿಕೊಂಡರು.
ಮುಖ್ಯಂಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಬಂದಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವರಿಗೆ ಸ್ಥಳದಲ್ಲೇ ಪರಿಹಾರ ನೀಡಿ ಇನ್ನು ಕೆಲವರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವಂತೆ ಭರವಸೆ ನೀಡಿದರು.
ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಪರ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೆಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಜನಸ್ಪಂದನ ಕಾರ್ಯಕ್ರಮ ೨ತಿಂಗಳ ಹಿಂದೆಯೇ ಮಾಡಬೇಕಿತ್ತು ಎಂದರು. ತಮ್ಮ ಜಿಲ್ಲೆಗಳಲ್ಲೆ ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದ್ದೆ. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದ್ದವು. ಇನ್ನು ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಸಂಬಂಧಪಟ್ಟ ಜಿಲ್ಲೆಗಳಲ್ಲೇ ಜನಸ್ಪಂದನ ಕಾರ್ಯಕ್ರಮ ನಡೆಸಿದರೆ ಜನರಿಗೆ ಸ್ಥಳದಲ್ಲೇ ಪರಿಹಾರ ನೀಡಬಹುದು. ಜಿಲ್ಲಾಧಿಕಾರಿಗಳು, ತಹಶಿಲ್ದಾರ್ ಮತ್ತು ವಿಭಾಗಿಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಜನರು ಬೆಂಗಳೂರಿಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದರು.
ಮೂರುವರೆ ಸಾವಿರ ಅರ್ಜಿ ಸ್ವೀಕಾರಿಸಿದ ಸಿಎಂ
ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾದ ಮುಖ್ಯಂಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜನಸ್ತೋಮವೇ ಹರಿದು ಬಂದಿತ್ತು. ಸಂಜೆ ೫ ಗಂಟೆ ತನಕ ಜನರ ಅಹವಾಲು ಸ್ವೀಕರಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟ್ಟು ಮೂರುವರೆ ಸಾವಿರ ಅರ್ಜಿಗಳನ್ನು ಸ್ವೀಕರಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಆದಷ್ಟು ಬೇಗ ಪರಿಹಾರಗಳನ್ನು ನೀಡಿ ಸಿಎಂ ಕಚೇರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದರು.
ಮೂರು ತಿಂಗಳಿಗೊಮ್ಮೆ ಜನಸ್ಪಂದನಾ ಕಾರ್ಯಕ್ರಮ
ಇನ್ನು ಮುಂದೆ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಂಬರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ಇಷ್ಟು ಅರ್ಜಿಗಳು ಬರಬಾರದು. ಒಂದು ವೇಳೆ ಬಂದರೆ ಕೆಳಹಂತದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ
ಸಿಎಂ ತಲೆ ಸವರಿ ಆಶಿರ್ವಾದಿಸಿದ ಅಜ್ಜಿ
ವಯೋವೃದ್ಧೆ ಒಬ್ಬರ ಸಮಸ್ಯೆಯನ್ನು ಕೇಳಿದ ಸಿಎಂ ಸ್ಥಳದಲ್ಲೇ ಅದಕ್ಕೆ ಪರಿಹಾರವನ್ನು ಸೂಚಿಸಿದ್ದಾರೆ. ಇದರಿಂದ ಖುಷಿಯಾದ ಅಜ್ಜಿ, ಪ್ರೀತಿಯಿಂದ ಸಿದ್ದರಾಮಯ್ಯನವರ ತಲೆ ಸವರಿ, ಆಶೀರ್ವಾದ ಮಾಡಿದರು. ಇದಕ್ಕೆ ಪ್ರತಿಯಾಗಿ ಸಿಎಂ ಕೂಡ ವೃದ್ಧೆಯ ತಲೆ ಸವರಿದ ಘಟನೆ ಎಲ್ಲರ ಗಮನ ಸೆಳೆಯಿತು.