ಮೈಸೂರು: ನಗರದಲ್ಲಿ ಕಳೆದ ಎರಡು ವರ್ಷದಿಂದ ಮೈಸೂರಿನ ಎರಡು ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಮಾಡುತ್ತಿದ್ದ ಗುಂಪೊಂದನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಚೆನೈ ವೈದ್ಯ ಸೇರಿದಂತೆ ೮ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮೈಸೂರು ಮೂಲದ ವೈದ್ಯ ನಾಪತ್ತೆಯಾಗಿದ್ದಾನೆ. ತನಿಖೆ ವೇಳೆ ಎರಡು ವರ್ಷದಲ್ಲಿ ೯೦೦ ಭ್ರೂಣ ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯ ಸಬ್ ಇಂಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಅಕ್ಟೋನರ್ ೧೫ರಂದು ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಸ್ಪದವಾಗಿ ಕಂಡುಬಂದ ಕಾರೊಂದನ್ನು ತಪಾಸಣೆ ಮಾಡಿದ ವೇಳೆ ಶಿವಲಿಂಗೆಗೌಡ ಮತ್ತು ನಯನ್‌ಕುಮಾರ್ ಎಂಬುವವರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಭ್ರೂಣ ಹತ್ಯೆ ಜಾಲದ ಬಗ್ಗೆ ತಿಳಿದು ಬಂದಿದೆ.
ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಂಗಳೂರು ಪೊಲೀಸರು ಚೆನೈ ವೈದ್ಯ ಡಾ.ತುಳಸಿರಾಮ(೪೧), ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆಯ ವೈದ್ಯ ಡಾ.ಚಂದನ್ ಬಲ್ಲಾಳ್ ಪತ್ನಿಯೂ ಆದ ಈ ಆಸ್ಪತ್ರೆಯ ವ್ಯವಸ್ಥಾಪಕಿ ಸಿ.ಎಂ.ಮೀನಾ(೩೮) ಮಂಡಿ ಮೊಹಲ್ಲಾ ನಿವಾಸಿ ರಿಜ್ಮಾಖಾನುಮ್(೩೮)ಲ್ಯಾಬ್ ಟೆಕ್ನೀಶಿಯನ್ ನಿಸಾರ್ ಮತ್ತು ಮಧ್ಯವರ್ತಿಗಳಾದ ಶಿವಲಿಂಗೇಗೌಡ, ನಯನ್‌ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಗುಂಪು ತಿಂಗಳಿಗೆ ೨೫ ರಿಂದ ೩೦ ಭ್ರೂಣಹತ್ಯೆ ಮಾಡುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಭ್ರೂಣ ಲಿಂಗ ಪತ್ತೆಗೆ ೨೫ ರಿಂದ ೩೦ ಸಾವಿರ ರೂ ಮತ್ತು ಭ್ರೂಣಹತ್ಯೆಗೆ ೫೦ಸಾವಿರ ರೂ ತಂಡ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.