Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ರಾಜಸ್ಥಾನ ಚುನಾವಣೆ: ಶೇ.68 ರಷ್ಟು ಶಾಂತಿಯುತ ಮತದಾನ

ಜೈಪುರ : ಲೋಕಸಭೆ ಚುನಾವಣೆ ದೃಷ್ಟಿಯಿಂದ ಹೆಚ್ಚಿನ ಗಮನ ಸೆಳೆದಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯು ಶನಿವಾರ ಮುಕ್ತಾಯಗೊಂಡಿದೆ. ರಾಜ್ಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ.68.24ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಶೇ.74.72 ಮತದಾನವಾಗಿತ್ತು.

ಒಟ್ಟು 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನರ್ ನಿಧನದ ಹಿನ್ನೆಲೆಯಲ್ಲಿ ಶ್ರೀಗಂಗಾ ನಗರ ಜಿಲ್ಲೆಯ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.

ಶನಿವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಒಟ್ಟು 1,862 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ರಾಜಸ್ಥಾನದಲ್ಲಿ ಒಟ್ಟು 5,29,31,152 ಮತದಾರರಿದ್ದಾರೆ. ಈ ವರ್ಷ 18-19 ವಯೋಮಿತಿಯಲ್ಲಿ ಒಟ್ಟು 22,61,008 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಂಚೆ ಮತ ಪತ್ರಗಳ ಮೂಲಕ ಈಗಾಗಲೇ ಕನಿಷ್ಠ ಮೂರು ಲಕ್ಷ ಮತಗಳು ಚಲಾವಣೆಯಾಗಿವೆ.

ರಾಜ್ಯಾದ್ಯಂತ ಒಟ್ಟು 51,890 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 26,000 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯವಿದೆ. ಸೂಕ್ಷ್ಮ ಮತಗಟ್ಟೆಗಳು 12,500, 2,74,000 ಸರ್ಕಾರಿ ಸಿಬ್ಬಂದಿಗಳು, 1,71,000 ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್, ಮೈಕ್ರೋ ಅಬ್ಸರ್ವರ್‌ಗಳು ಮತ್ತು ವಿಡಿಯೋಗ್ರಫಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.

ಇಂದು ಶಾಂತಿಯುತ ಮತದಾನ ನಡೆದಿದ್ದು, ಪ್ರಮುಖ ನಾಯಕರಾದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಬಿಜೆಪಿಯ ಮಾಜಿ ಸಿಎಂ ವಸುಂಧರಾ ರಾಜೇ, ಮಾಜಿ ಸಿಎಂ ಸಚಿನ್‌ ಪೈಲಟ್‌ ಇತರ ನಾಯಕರ ಭವಿಷ್ಯ ಏನೆಂದು ತಿಳಿಯಲಿದ್ದು, ಡಿಸೆಂಬರ್‌ ೩ ರಂದು ಮತದಾನ ಪ್ರಭು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ