ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ಮತ್ಸದಿ ಅನಂತ ಕುಮಾರ್ ಅವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೆನೆದಿದ್ದಾರೆ.
ಭಾನುವಾರ ನಗರದ ಲಾಲ್‌ಬಾಗ್‌ನಿಂದ ಅದಮ್ಯ ಚೇನತನದವರೆಗೆ ಆಯೋಜಿಸಲಾಗಿದ್ದ 4ನೇ ಅನಂತ ಸ್ಮಂತಿ ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.
ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ. ಅಷ್ಟೇ ಮಾತ್ರವಲ್ಲದೆ, ಇವರ ನಡುವೆ ಅವಿನಾಭಾವ ಸಂಬಂಧವಿತ್ತು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ.ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷ ಪಿ.ವಿ.ಕೃಷ್ಣ ಭಟ್ ಸೇರಿದಂತೆ ಪ್ರಮುಖರು ಹಾಜರಿದ್ದರು.