Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 4 ಮಂದಿ ಆರೋಪಿಗಳ ಬಂಧನ

ಪುತ್ತೂರು : ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಮನೀಶ್, ಬನ್ನೂರು ಗ್ರಾಮದ ಕೃಷ್ಣನಗರ ನಿವಾಸಿ, ಬಸ್ ಚಾಲಕ ಚೇತನ್, ಪುತ್ತೂರು ಹೊರವಲಯದ ಪಡೀಲು ನಿವಾಸಿ ಕೇಶವ ಪಡೀಲು ಮತ್ತು ಮಂಜುನಾಥ ಯಾನೆ ಮಂಜು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕಾಗಿ ಅಕ್ಷಯ್ ಕಲ್ಲೇಗ ಅವರನ್ನು ತಂಡವೊಂದು ಅಟ್ಟಾಡಿಸಿ ತಲವಾರಿನಿಂದ ಕಡಿದು ಕೊಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಪುತ್ತೂರಿನ ನೆಹರುನಗರದಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತಕ್ಕೆ ಸಂಬಂಧಿಸಿ ಅಕ್ಷಯ್ ಕಲ್ಲೇಗ ಹಾಗೂ ಆರೋಪಿಗಳ ಪೈಕಿ ಮನೀಶ್ ಮತ್ತು ಚೇತನ್ ನಡುವೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಯ ಬಳಿಕ ಅಕ್ಷಯ್ ಕಲ್ಲೇಗ ತನ್ನ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಎಂಬವರ ಜತೆ ನೆಹರೂ ನಗರದ ಕೆನರಾ ಬ್ಯಾಂಕ್ ಎಟಿಎಂ ಬಳಿ ನಿಂತುಕೊಂಡಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳಾದ ಮನೀಶ್, ಚೇತನ್, ಮಂಜುನಾಥ ಮತ್ತು ಕೇಶವ ಪಡೀಲು ಅವರು ಅಕ್ಷಯ್ ಕಲ್ಲೇಗ ಜೊತೆಗೆ ನಡೆದಿದ್ದ ಮಾತಿನ ಚಕಮಕಿಗೆ ಸಂಬಂಧಿಸಿ ತಕರಾರು ಎತ್ತಿ ತಲವಾರಿನಿಂದ ಕಡಿದು ಕೊಲೆ ಮಾಡಿರುವುದಾಗಿ ದೂರಲಾಗಿದೆ.

ಅಕ್ಷಯ್ ಮಾಣಿ-ಮೈಸೂರು ಹೆದ್ದಾರಿ ಬದಿಯ ಪೊದೆಯ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಕ್ಷಯ್ ಜತೆಗಿದ್ದ ಅವರ ಸ್ನೇಹಿತ ಚಿಕ್ಕಮುಡ್ನೂರಿನ ವಿಖ್ಯಾತ್ ಈ ಸಂದರ್ಭ ತಪ್ಪಿಸಿಕೊಂಡು ಓಡಿಹೋಗಿ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ವಿಖ್ಯಾತ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳು ಠಾಣೆಗೆ ಶರಣು : ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ಮನೀಶ್ ಮತ್ತು ಚೇತನ್ ಕೊಲೆ ನಡೆಸಿದ ಸ್ಥಳದಿಂದ ನೇರವಾಗಿ ಪುತ್ತೂರು ನಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದರು. ಉಳಿದ ಇಬ್ಬರು ಆರೋಪಿಗಳಾದ ಕೇಶವ ಪಡೀಲು ಮತ್ತು ಮಂಜುನಾಥ ಯಾನೆ ಮಂಜು ಎಂಬವರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕೊಲೆ ನಡೆಸಲಾದ ಸ್ಥಳಕ್ಕೆ ಕರೆತಂದು ಪೊಲೀಸರು ಮಂಗಳವಾರ ಸಂಜೆ ಸ್ಥಳದ ಮಹಜರು ನಡೆಸಿದರು.

ಮೃತರ ಅಂತ್ಯ ಸಂಸ್ಕಾರ ಮನೆಯ ಮುಂಭಾಗದಲ್ಲಿ ಇಂದು ಮಧ್ಯಾಹ್ನ ನಡೆಸಲಾಯಿತು. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ