ಮಡಿಕೇರಿ : ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಬಿರ್ಚಿ ವುಡ್ ರೆಸಾರ್ಟ್ ಸಮೀಪದ ಈ ಅವಘಡ ನಡೆದಿದೆ. ರಾತ್ರಿ ಘಟನೆ ನಡೆದಿದ್ದರೂ ನಿರ್ಜನ ಪ್ರದೇಶವಾದ್ದರಿಂದ ಬೆಳಗಿನವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.
ಬೈಕ್ ಲೈಟ್ ಕಂಬಕ್ಕೆ ಅಪ್ಪಳಿಸಿದ್ದರಿಂದ ಬೈಕ್ನಿಂದ ಚಿಮ್ಮಿಬಿದ್ದ ಸವಾರರು ಸ್ಥಳದಲ್ಲೆ ಪ್ರಾಣ ಚೆಲ್ಲಿದ್ದಾರೆ. ಧಾರಾಕಾರವಾಗಿ ಮಳೆ ಬರುತ್ತಿದ್ದುದರಿಂದ ದಾರಿ ಕಾಣದೆ ಅಥವಾ ಸ್ಕಿಡ್ ಆಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಉದಯ(25) ಹಾಗೂ ಚಂದನ್(26) ಮೃತ ದುರ್ಧೈವಿಗಳು. ಇಬ್ಬರೂ ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳು. ನಿನ್ನೆ ರಾತ್ರಿಯೇ ಇವರು ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ಅಪಘಾತ ನಡೆದಿದ್ದು, ಮುಂಜಾನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.