ಮುಂಬೈ : ಇತ್ತೀಚೆಗೆ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೋ ಕುರಿತಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ನಟ ಅಮಿತಾಭ್ ಬಚ್ಚನ್ ಆಗ್ರಹಿಸಿದ್ದಾರೆ.
ರಶ್ಮಿಕಾ ಅವರ ಮುಖ ಹೊಂದಿದ್ದ ಮಹಿಳೆಯೊಬ್ಬರು ಲಿಫ್ಟ್ ಪ್ರವೇಶಿಸುತ್ತಿರುವ ವೀಡಿಯೋ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ನಂತರ ಇದು ರಶ್ಮಿಕಾ ಅವರ ಡೀಪ್‌ಫೇಕ್ ವೀಡಿಯೋ ಎಂದು ಟ್ವಿಟರಿಗರೊಬ್ಬರು ಹೇಳಿದ್ದರು. ಇದು ಅಮಿತಾಭ್ ಅವರ ಗಮನಕ್ಕೂ ಬಂದ ನಂತರ ಅವರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿ ಭಾರತದಲ್ಲಿ ಡೀಪ್‌ಫೇಕ್ ವಿರುದ್ಧ ಕ್ರಮಕ್ಕೆ ಅಗತ್ಯವಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ವೈರಲ್ ವೀಡಿಯೋ ನೋಡಿರಬಹುದು ಆದರೆ ಅದು ಝಾರಾ ಪಟೇಲ್ ಅವರ ವೀಡಿಯೋ ಎಂದು ತಿಳಿಸಿದ್ದರು.
“ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ (0:01)ಗೆ ಅದರಲ್ಲಿದ್ದಾಕೆಯ ಮುಖ ರಶ್ಮಿಕಾ ಮುಖ ಆಗಿ ಪರಿವರ್ತನೆಯಾಗುತ್ತದೆ,” ಎಂದು ಟ್ವಿಟರಿಗರು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಗ್ ಬಿ “ಹೌದು. ಇದು ಕಾನೂನು ಕ್ರಮಕ್ಕೆ ಬಲವಾದ ಕಾರಣ ಆಗುತ್ತದೆ,” ಎಂದಿದ್ದಾರೆ.