ಲಖನೌ : ಇತ್ತೀಚಿಗೆ ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸಮಾಜವಾದಿ ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮೂರು ಬಾರಿ ಸಂಸದರಾಗಿದ್ದ ರವಿ ವರ್ಮಾ ಅವರು ಸೋಮವಾರ ಕಾಂಗ್ರೆಸ್‌ಗೆ ಸೇರಲಿದ್ದಾರೆ.
“ನಾನು ಸುಮಾರು 25 ವರ್ಷಗಳಿಂದ ಸಮಾಜವಾದಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ, ಅಖಿಲೇಶ್ ಯಾದವ್ ಅವರನ್ನು ನೇರವಾಗಿ ಭೇಟಿ ಮಾಡಿ ಪಕ್ಷ ಸೇರಿ ವಿವಧ ಹುದ್ದೆಗಳನ್ನು ಪಡೆದ ಹೊಸಬರು ಯಾವತ್ತೂ ಪಕ್ಷಕ್ಕಾಗಿ ಕೆಲಸ ಮಾಡಿಲ್ಲ. ಈ ನಡುವೆ ಗುತ್ತಿಗೆದಾರರು ಮತ್ತು ಭ್ರಷ್ಟ ಅಧಿಕಾರಿಗಳ ತಂಡ ಹುಟ್ಟಿಕೊಂಡವು. ಪಕ್ಷದಲ್ಲಿ ಜನರಿಗಾಗಿ ಕೆಲಸ ಮಾಡಲು ಯಾರಿಗೂ ಸಮಯವಿಲ್ಲ..” ಎಂದು ವರ್ಮಾ ಹೇಳಿದ್ದಾರೆ.
“ಪಕ್ಷಕ್ಕೆ ಸೇರ್ಪಡೆಯಾದ ಎಲ್ಲಾ ಹೊಸ ಸದಸ್ಯರು ಅಖಿಲೇಶ್ ಯಾದವ್ ಬಳಿಗೆ ಹೋಗಿ ರಾತ್ರೋರಾತ್ರಿ ಲಕ್ಷಾಧಿಪತಿಯಾಗಲು ಬಯಸಿದ್ದರು… ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ, ನಾನು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದೆ… ನಾಳೆ ಕಾಂಗ್ರೆಸ್ ಸೇರುತ್ತೆನೆ” ಎಂದು ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಿರಿಯ ರಾಜಕಾರಣಿಗಳಾಗಿದ್ದು, ಅವರ ನಡುವೆ ಹೋಲಿಕೆ ಮಾಡುವುದಿಲ್ಲ. ಆದರೆ ಜನ ರಾಹುಲ್ ಗಾಂಧಿ ಅವರನ್ನು ಅನುಸರಿಸಬೇಕು ಎಂದಿದ್ದಾರೆ.