Mysore
21
few clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಕಾಂಗ್ರೆಸ್‌ ಸರ್ಕಾರ ತಮ್ಮಲ್ಲಿನ ದ್ವಂದ್ವ ನಿಲುವುಗಳಿಂದಲೇ ಬಿದ್ದುಹೋಗಲಿದೆ : ಬಿ.ಸಿ.ಪಾಟೀಲ್

ಕಲಬುರಗಿ : ಬಿಜೆಪಿಯ ವಿರುದ್ಧ ಆಪರೇಷನ್ ಕಮಲ ಆರೋಪ ಮಾಡುವ ಕಾಂಗ್ರೆಸ್‌ನವರ ಸರ್ಕಾರ ಪತನವಾದರೆ ಅದು ಅವರ ಪಕ್ಷದವರಿಂದಲೆ ಆಗಿರುತ್ತದೆ. ಅವರಲ್ಲಿನ ಗೊಂದಲಗಳಿಂದಲೇ ರಾಜ್ಯ ಸರ್ಕಾರ ಬೀಳಲಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮಲ್ಲಿನ ದ್ವಂದ್ವ ನಿಲುವುಗಳಿಂದ ಈ ಸರ್ಕಾರ ಬಿದ್ದುಹೋಗಲಿದೆ. ಅದಕ್ಕೆ ಬಿಜೆಪಿ ಕಾರಣವಾಗುವುದಿಲ್ಲ. ಯಾಕೆಂದರೆ ಈ ಕಾಂಗ್ರೆಸ್ ಸರ್ಕಾರ ಬ್ಯಾಲೆನ್ಸ್ ತಪ್ಪಿ, ಒಳಜಗಳ ಪ್ರಾರಂಭವಾಗಿದೆ. ಅವರಿಗೆ ರೈತರ ಏಳಿಗೆ ಮುಖ್ಯವಾಗಿಲ್ಲ, ರಾಜ್ಯದ ಜನರ ಕುರಿತು ಚಿಂತೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಾಲ್ಕು ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅವರಲ್ಲೇ ಇನ್ನೂ ಸ್ಪಷ್ಟತೆ ಇಲ್ಲ, ಒಮ್ಮೆ ಸಿದ್ದರಾಮಯ್ಯ ನಾನೇ ಐದು ವರ್ಷ ಮುಖ್ಯಮಂತ್ರಿ ಎನ್ನುತ್ತಾರೆ. ಮತ್ತೊಮ್ಮೆ ಮಾಧ್ಯಮಗಳ ಮೇಲೆ ಆರೋಪಿಸುತ್ತಾರೆ. ಇಷ್ಟೊಂದು ಸುಳ್ಳುಗಳನ್ನು ಯಾಕೆ ಅವರು ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಇಂದು ಹೇಳಿದ್ದನ್ನು ನಾಳೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇವಲ ಗ್ಯಾರಂಟಿಗಳ ಬಗ್ಗೆನೇ ಮಾತನಾಡುವ ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಹಿತ ಕಾಯುವುದು ಮುಖ್ಯವಾಗಿಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ಆರೋಪಿಸುವ ಬದಲು, ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಕೆಲಸ ಮಾಡಲಿ ಎಂದು ಬಿ.ಸಿ.ಪಾಟೀಲ್ ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!