ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವರುಣಾರ್ಭದ ಹೊರತಾಗಿಯೂ ಫಖರ್ ಝಮಾನ್ (126*) ಅವರ ಸ್ಪೋಟಕ ಶತಕದ ಬಲದಿಂದ ಪಾಕಿಸ್ತಾನ ತಂಡ 21 ರನ್‌ಗಳಿಂದ (ಡಿಎಲ್‌ಎಸ್ ನಿಯಮ) ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತು. ಆ ಮೂಲಕ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಆಸೆ ಜೀವಂತವಾಗಿರಿಸಿಕೊಂಡಿತು.
ನ್ಯೂಜಿಲೆಂಡ್ ನೀಡಿದ್ದ 402 ರನ್‌ಗಳ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ ತಂಡ, 6 ರನ್ ಇರುವಾಗಲೇ ಅಬ್ದುಲ್ಲಾ ಶಫಿಕ್ ಅವರನ್ನು ಕಳೆದುಕೊಂಡಿತ್ತು. ಈ ವೇಳೆ ಕಿವೀಸ್ ಗೆಲ್ಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಫಖರ್ ಝಮಾನ್ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗುವಂತೆ ಮಾಡಿದರು. ಮೊದಲ ಬಾರಿ ಮಳೆ ಬರುವ ಹೊತ್ತಿಗೆ ಫಖರ್ ಝಮಾನ್ ಕೇವಲ 67 ಎಸೆತಗಳಲ್ಲಿ 106 ರನ್ ಗಳಿಸಿ ಶತಕ ಬಾರಿಸಿದ್ದರು. ಆ ಮೂಲಕ ಪಾಕಿಸ್ತಾನ 21.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಈ ವೇಳೆ ಡಿಎಲ್‌ಎಸ್ ನಿಯಮದ ಪ್ರಕಾರ ಪಾಕಿಸ್ತಾನ 10 ರನ್ ಮುನ್ನಡೆ ಗಳಿಸಿತ್ತು.
ಮಳೆಯಿಂದ ಪಂದ್ಯ ಕೆಲ ನಿಮಿಷಗಳ ನಿಂತಿದ್ದರಿಂದ ಅಂಪೈರ್‌ಗಳು 41 ಓವರ್‌ಗಳಿಗೆ ಪಾಕಿಸ್ತಾನ ತಂಡಕ್ಕೆ 342 ರನ್‌ಗಳ ಗುರಿಯನ್ನು ಪರಿಷ್ಕೃರಿಸಿದರು. ಮಳೆ ನಿಂತ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಪಾಕಿಸ್ತಾನ ತಂಡ ಎರಡನೇ ಬಾರಿ ಮಳೆ ಬರುವ ಹೊತ್ತಿಗೆ 25.3 ಓವರ್‌ಗಳಿಗೆ ಒಂದೇ ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು.
ಈ ಸಮಯಕ್ಕೆ ಫಖಾರ್ ಝಮಾನ್ ಒಟ್ಟಾರೆ ಎದರಿಸಿದ 81 ಎಸೆತಗಳಲ್ಲಿ ಅಜೇಯ 126 ರನ್ ಸಿಡಿಸಿದ್ದರು. ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಿಲ್ಲ ಎಂಬುದನ್ನುಅರಿತ ಅಂಪೈರ್‌ಗಳು ಡಿಎಲ್‌ಎಸ್ ನಿಯಮದ ಪ್ರಕಾರ ಪಾಕಿಸ್ತಾನ ತಂಡಕ್ಕೆ 21 ರನ್‌ಗಳ ಜಯವನ್ನು ಘೋಷಿಸಿದರು. ಬಾಬರ್ ಆಝಮ್ 66 ರನ್ ಗಳಿಸಿದರೂ ಫಖರ್ ಝಮನ್ ಅವರ ಸ್ಪೋಟಕ ಶತಕ ಪಾಕ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು.
ನ್ಯೂಜಿಲೆಂಡ್: 402-6 : ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 401 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪಾಕಿಸ್ತಾನ ತಂಡಕ್ಕೆ 402 ರನ್‌ಗಳ ಕಠಿಣ ಗುರಿ ನೀಡಿತ್ತು. ಕಿವೀಸ್ ಪರ ಕೇನ್ ವಿಲಿಯಮ್ಸನ್ 95 ರನ್ ಗಳಿಸಿದೆ, ಯುವ ಬ್ಯಾಟರ್ ರಚಿನ್ ರವೀಂದ್ರ 108 ರನ್ ಗಳಿಸಿದರು. ಡೆವೋನ್ ಕಾನ್ವೆ 35 ರನ್ ಹಾಗೂ ಗ್ಲೆನ್ ಫಿಲಿಪ್ಸ್ 41 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದ್ದರು.
ಅಪ್ಪ-ಅಮ್ಮನ ಊರಿನಲ್ಲಿ ರಚಿನ್ ರವೀಂದ್ರ ಆರ್ಭಟ : ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ನ್ಯೂಜಿಲೆಂಡ್ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ರಚಿನ್ ರವೀಂದ್ರ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ಬ್ಯಾಟಿಂಗ್ ಆಕರ್ಷಣೆಯಿಂದ ಕೂಡಿತ್ತು. ಈ ಜೋಡಿ ಎರಡನೇ ವಿಕೆಟ್‌ಗೆ 193 ನ್‌ಗಳನ್ನು ಕಲೆ ಹಾಕಿತು, ಕೇನ್ ವಿಲಿಯಮ್ಸನ್ 95 ರನ್‌ಗಳಿಸಿ ಕೇವಲ 5 ರನ್‌ನಿಂದ ಶತಕ ವಂಚಿತರಾದರು.
ತಮ್ಮ ತವರೂರಾದ ಬೆಂಗಳೂರಿನಲ್ಲಿ ರಚಿನ್ ರವೀಂದ್ರ ಬ್ಯಾಟಿಂಗ್ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. 94 ಎಸೆತಗಳಲ್ಲಿ 108 ರನ್ ಗಳಿಸಿದ ರವೀಂದ್ರ, ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಶತಕ ಪೂರ್ಣಗೊಳಿಸಿದರು. ಆ ಮೂಲಕ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ 500ಕ್ಕಿಂತ ಹೆಚ್ಚಿನ ರನ್‌ಗಳನ್ನು ದಾಖಲಿಸಿದರು.
ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದ ದಕ್ಷಿಣ ಆಫ್ರಿಕಾ : ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಗೆಲುವು ಪಡೆಯುತ್ತಿದ್ದಂತೆ ದಕ್ಷಿಣ ಆಫ್ರಿಕಾ ತಂಡ 12 ಅಂಕಗಳೊಂದಿಗೆ ಏಕದಿನ ವಿಶ್ವಕಪ್ ಸೆಮಿಫೈನಲ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಿತು. ಆ ಮೂಲಕ ಭಾರತದ ಬಳಿಕ ಸೆಮೀಸ್‌ಗೆ ಅರ್ಹತೆ ಪಡೆದ ಎರಡನೇ ತಂಡ ಎಂಬ ಕೀರ್ತಿಗೆ ಹರಿಣ ಪಡೆ ಭಾಜನವಾಯಿತು. ಇನ್ನುಳಿದ ಎರಡು ಸ್ಥಾನಗಳಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಸ್ಕೋರ್ ವಿವರ:
ನ್ಯೂಜಿಲೆಂಡ್: 50 ಓವರ್‌ಗಳಿಗೆ 401-1 (ರಚಿನ್ ರವೀಂದ್ರ 108, ಕೇನ್ ವಿಲಿಯನ್ಸನ್ 95, ಗ್ಲೆನ್ ಫಿಲಿಪ್ಸ್ 41, ಡೆವೋನ್ ಕಾನ್ವೇ 35; ಮೊಹಮ್ಮದ್ ವಸೀಮ್ ಜೂನಿಯರ್ 60 ಕ್ಕೆ 3)
ಪಾಕಿಸ್ತಾನ: 25.3 ಓವರ್‌ಗಳಿಗೆ 200-1 (ಫಖರ್ ಝಮಾನ್ 126*, ಬಾಬರ್ ಆಝಮ್ 66*; ಟಿಮ್ ಸೌಥಿ 27ಕ್ಕೆ1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಫಖರ್ ಝಮಾನ್