ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಏಕೆ ಅಧಿಕಾರಕ್ಕೆ ತಂದೆವೋ ಎಂದು ಜನ ನೊಂದುಕೊಳ್ಳುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಈ ಸರ್ಕಾರ ಇರಬಾರದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ ಸಮ್ಮಿಶ್ರ ಸರಕಾರ. ಕಾಂತರಾಜ್ ವರದಿಯನ್ನು ಬೆಂಕಿಗೆ ಹಾಕಿ ಸುಡಬೇಕು. ಕಾಂತರಾಜ್ ವರದಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರೆ, ಡಿ.ಕೆ.ಶಿವಕುಮಾರ್ ವರದಿ ಬಿಡುಗಡೆ ಮಾಡಲು ಬಿಡಲ್ಲ ಎಂದು ಹೇಳುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼʼರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಲೆಕ್ಕವೇ ಸಿಗುತ್ತಿಲ್ಲ. ಜಿಲ್ಲಾ ಮಂತ್ರಿಗಳು ರೈತರ ಕಷ್ಟವನ್ನು ಆಲಿಸುತ್ತಿಲ್ಲ. ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆʼʼ ಎಂದು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕನಿಲ್ಲದ ಹಾಗೂ ಜೆಡಿಎಸ್ ಜನರಿಲ್ಲದ ಪಕ್ಷಗಳು ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ʼʼದೇಶದಲ್ಲಿ ಯಾವುದೇ ವ್ಯಕ್ತಿಯನ್ನು ಕೇಳಿದರೂ ಅವರಿಗೆ ನರೇಂದ್ರ ಮೋದಿ ಗೊತ್ತು, ನಿಮ್ಮ ನಾಯಕ ಯಾರು? ರಾಹುಲ್ ಗಾಂಧಿನಾʼʼ ಎಂದು ಪ್ರಶ್ನಿಸಿದರು.
ʼʼಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದಿದ್ದ ಪ್ರಿಯಾಂಕ ಖರ್ಗೆ ಈಗ ನಾನೆ ಸಿಎಂ ಆಗಬೇಕು ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಯಾವ ನ್ಯಾಯ, ಅವರಿಗೆ ಮಾನ ಮರ್ಯಾದೆ ಇದಿಯಾʼ?ʼ ಎಂದು ಪ್ರಶ್ನಿಸಿದರು.