ಕೋಲ್ಕತಾ : ‘ಪ್ರಶ್ನೆಗಳಿಗಾಗಿ ಲಂಚ ’ ಆರೋಪ ಕುರಿತು ವಿಚಾರಣೆ ಸಂದರ್ಭದಲ್ಲಿ ಲೋಕಸಭೆಯ ನೀತಿ ಸಮಿತಿಯು ಅವಹೇಳನಕಾರಿ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಆರೋಪಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು,ತನಿಖೆಗೆ ಸಹಕರಿಸಲು ತಾನು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಸ್ತ್ರೀದ್ವೇಷದ ವಿರುದ್ಧ ರಕ್ಷಣೆ ಮತ್ತು ಸಭ್ಯತೆಯ ಮಟ್ಟವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನೀತಿ ಸಮಿತಿಯ ತನಿಖೆಯನ್ನು ರಾಜಕೀಯ ಪ್ರತೀಕಾರ ಎಂದು ಬಣ್ಣಿಸಿದ ಅವರು, ತನ್ನನ್ನು ಸಂಸತ್ತಿನಿಂದ ಅಮಾನತುಗೊಳಿಸುವುದು ತನಿಖೆಯ ಏಕೈಕ ಉದ್ದೇಶವಾಗಿದೆ ಎಂದು ಹೇಳಿದರು.
ಸಮಿತಿಯ ವಿಚಾರಣೆ ಸಂದರ್ಭದಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಅಪ್ರಸ್ತುತ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಆರೋಪಿಸಿದ ಮೊಯಿತ್ರಾ,‘ತನಿಖೆಗೆ ಸಹಕರಿಸಲು ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸದಾ ಸಿದ್ಧಳಿದ್ದೇನೆ. ಆದರೆ ಸಭ್ಯತೆಯ ಸೀಮಾರೇಖೆ ಇರಬೇಕು. ಅಗ್ಗದ ಮತ್ತು ಅವಹೇಳನಕಾರಿ ಪ್ರಶ್ನೆಗಳಿಂದ ನನಗೆ ರಕ್ಷಣೆಯ ಅಗತ್ಯವಿದೆ. ಈ ಬಗ್ಗೆ ನಾನು ಲೋಕಸಭಾ ಸ್ಪೀಕರ್‌ಗೂ ಬರೆದಿದ್ದೇನೆ’ ಎಂದರು.
‘ಕೊಳಕು, ಅಸಹ್ಯಕರ ಸ್ತ್ರೀದ್ವೇಷದ ವಿರುದ್ಧ ನನಗೆ ರಕ್ಷಣೆ ನೀಡಬೇಕು ಎಂದು ನಾನು ಲೋಕಸಭಾ ಸ್ಪೀಕರ್‌ಗೆ ತಿಳಿಸಿದ್ದೇನೆ. ವಿಚಾರಣೆಗೆ ಸಂಬಂಧಿಸಿದ ಪ್ರತಿಯೊಂದಕ್ಕೂ ನಾನೀಗಾಗಲೇ ಉತ್ತರಿಸಿದ್ದೇನೆ. ನನ್ನ ನಿಲುವನ್ನು ನೂರು ಸಲ ಸ್ಪಷ್ಟಪಡಿಸಿದ್ದೇನೆ. ನಾನು ಯಾವುದಾದರೂ ನಿಯಮವನ್ನು ಉಲ್ಲಂಘಿಸಿದ್ದರೆ ಆ ಬಗ್ಗೆ ನನಗೆ ತಿಳಿಸಬೇಕು. ಅವರು ನನಗೆ ಯಾವುದೇ ಪ್ರಶ್ನೆಗಳನ್ನು ಕೇಳಬಯಸಿದರೂ ಪರವಾಗಿಲ್ಲ,ಆದರೆ ಈ ರೀತಿಯಲ್ಲಲ್ಲ’ ಎಂದು ಹೇಳಿದ ಮೊಯಿತ್ರಾ,ತನ್ನ ಲಾಗಿನ್ ಐಡಿ ಮತ್ತು ಉಡುಗೊರೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತಾನೀಗಾಗಲೇ ಉತ್ತರಿಸಿದ್ದೇನೆ. ತಾನು ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ ಎಂದರು.
ಉದ್ಯಮಿ ದರ್ಶನ ಹಿರಾನಂದನಿಯವರ ಸೂಚನೆಯ ಮೇರೆಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದ ಮತ್ತು ತನ್ನ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದ ಆರೋಪಗಳನ್ನು ಮೊಯಿತ್ರಾ ಎದುರಿಸುತ್ತಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ ದುಬೆಯವರು ಮೊಯಿತ್ರಾ ವಿರುದ್ಧ ನೀತಿ ಸಮಿತಿಗೆ ದೂರು ಸಲ್ಲಿಸಿದ್ದಾರೆ.