ನವದೆಹಲಿ: ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ನ್ಯಾಯಾಲಯ ಡಿಸೆಂಬರ್ 1 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದ ಮೇರೆಗೆ ಉಗ್ರ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣದ ತನಿಖೆಯ ಸಮಯದಲ್ಲಿ ತನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವಂತೆ ಪ್ರಬೀರ್ ಪುರ್ಕಾಯಸ್ಥ ಸಲ್ಲಿಸಿದ ಅರ್ಜಿಗೆ ಉತ್ತರ ನೀಡಲು ಮುಂಬೈನ ನ್ಯಾಯಾಲಯ ದೆಹಲಿ ಪೊಲೀಸರಿಗೆ 10 ದಿನಗಳ ಕಾಲಾವಕಾಶ ನೀಡಿದೆ.
ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ನವೆಂಬರ್ 2, 2023 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಮತ್ತೆ ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿದೆ.
ಚೀನಾ ಪರ ಪ್ರಚಾರಕ್ಕಾಗಿ ಪೋರ್ಟಲ್‌ಗೆ ಹಣ ಬಂದಿದೆ ಎಂಬ ಆರೋಪದ ಮೇಲೆ ಅಕ್ಟೋಬರ್ 3 ರಂದು ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಇಬ್ಬರನ್ನು ಬಂಧಿಸಿತ್ತು.