Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕಾಂಗ್ರೆಸ್‌ ಭಿನ್ನಮತ ಶಮನಕ್ಕೆ ವೇಣುಗೋಪಾಲ್- ಸುರ್ಜೇವಾಲಾಗೆ ಟಾಸ್ಕ್!

ಬೆಂಗಳೂರು: ಮುಖ್ಯಮಂತ್ರಿ ಅಧಿಕಾರವಧಿ ಬಗ್ಗೆ ಪದೇ ಪದೇ ರಾಜ್ಯ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

2024ರ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಮನಗಂಡ ಹೈಕಮಾಂಡ್, ಭಿನ್ನಮತಕ್ಕೆ ಬ್ರೇಕ್ ಹಾಕಲು ಎಐಸಿಸಿ ಪ್ರಧಾನಕಾರ್ಯದರ್ಶಿನಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ ವೇಣುಗೋಪಾಲ್ ಅವರಿಗೆ ಟಾಸ್ಕ್ ನೀಡಿದೆ.

ಅಧಿಕಾರ ಹಂಚಿಕೆ ಬಗ್ಗೆ ಪದೇ ಪದೇ ಹೇಳಿಕೆ ನೀಡಬಾರದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಾರ್ನಿಂಗ್ ನೀಡಿದ್ದರೂ ರಾಜ್ಯ ಕಾಂಗ್ರೆಸ್ ನಾಯಕರು ಕೇರ್ ಮಾಡದೆ ಮತ್ತೆ ಅದೇ ವಿಷಯಗಳ ಬಗ್ಗೆ ಚರ್ಚೆ ಮುಂದುವರಿಸುತ್ತಿರುವುದರಿಂದ ಕೇಂದ್ರ ನಾಯಕರ ಮಧ್ಯ ಪ್ರವೇಶ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಕ್ಕೆ ಧಾವಿಸಿರುವ ರಣ್ ದೀಪ್ ಸಿಂಗ್ ಸುರ್ಜೆವಾಲಾ ಮತ್ತು ಕೆ.ಸಿ ವೇಣುಗೋಪಾಲ್ ಬುಧವಾರ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ್ದಾರೆ. ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಮನೆಯಲ್ಲಿ ಸಿದ್ದರಾಮಯ್ಯ ಅವರ  ಡಿನ್ನರ್ ಮೀಟಿಂಗ್ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳು ಕಾಂಗ್ರೆಸ್ ಹೈಕಮಾಂಡ್ ಅನ್ನು ಚಿಂತೆಗೀಡು ಮಾಡಿದೆ. ಅಲ್ಲದೆ ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಸತೀಶ್ ಜಾರಕಿಹೊಳಿ, ಸುಮಾರು 20 ಶಾಸಕರನ್ನು ಪ್ರವಾಸಕ್ಕೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಅದನ್ನು ವೇಣುಗೋಪಾಲ್ ಬ್ರೇಕ್ ಹಾಕಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದವರಾದರೂ ಯಾವುದೇ ಬಣಕ್ಕೆ ಒಲವು ತೋರಲು ಬಯಸದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸುವ ಜವಾಬ್ದಾರಿ ಸುರ್ಜೇವಾಲಾ ಮತ್ತು ವೇಣುಗೋಪಾಲ್‌ಗೆ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವರಾದ ಕೆ.ಎನ್.ರಾಜಣ್ಣ, ಮಹದೇವಪ್ಪ, ಜಮೀರ್ ಅಹಮದ್ ಖಾನ್ ಸೇರಿದಂತೆ ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿರುವ ಕೆಲ ನಾಯಕರು ಅಹಿಂದ ನಾಯಕ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಾವಧಿ ಪೂರ್ಣಗೊಳಿಸುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ.

ಆದರೆ ಶಾಸಕರಾದ ಬಸವರಾಜು ವಿ ಶಿವಗಂಗಾ, ರವಿಕುಮಾರ್ ಗೌಡ (ಗಾಣಿಗ) ಸೇರಿದಂತೆ ಶಿವಕುಮಾರ್ ಬೆಂಬಲಿಗರು ಕಾಂಗ್ರೆಸ್ ಆಡಳಿತದ ಐದು ವರ್ಷಗಳಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.

ನಾನು ಸಿದ್ದರಾಮಯ್ಯ ಅವರ ಜೊತೆಗಿದ್ದೆ, ಮುಂದೆಯೂ ಅವರೊಂದಿಗಿದ್ದೇನೆ. ನಮ್ಮ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಬದಲಾವಣೆ ಮಾಡಬೇಕೇ  ಬೇಡವೆ ಎಂಬ ಬಗ್ಗೆ ನಿರ್ಧರಿಸುತ್ತಾರೆ ಎಂದು ಜಮೀರ್ ಅಹ್ಮದ್ ಖಾನ್ ಕೆಲವು ದಿನಗಳ ಹಿಂದೆಯಷ್ಟೇ ಹೇಳಿಕೆ ನೀಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ