Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಶ್ವಕಪ್‌ನಿಂದ ಹೊರಬಿದ್ದ ಬಾಂಗ್ಲಾದೇಶ

ಕೋಲ್ಕತಾ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ಮಂಗಳವಾರ ನಡೆದ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸಮಾಧಾನಪಟ್ಟುಕೊಂಡಿತು. ಈ ಸೋಲಿನಿಂದ ಬಾಂಗ್ಲಾದೇಶವು ಕೂಟದಿಂದ ಹೊರಬಿತ್ತು.

ಶಾಹೀನ್‌ ಶಾ ಅಫ್ರಿದಿ ಮತ್ತು ಮೊಹಮ್ಮದ್‌ ವಸೀಮ್‌ ಅವರ ಬಿಗು ದಾಳಿಯೆದುರು ರನ್‌ ಗಳಿಸಲು ಒದ್ದಾಡಿದ ಬಾಂಗ್ಲಾದೇಶವು 45.1 ಓವರ್‌ಗಳಲ್ಲಿ 204 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಆರಂಭಿಕರಾದ ಅಬ್ದುಲ್ಲ ಶಫೀಕ್‌ ಮತ್ತು ಫ‌ಖಾರ್‌ ಜಮಾನ್‌ ಅವರ ಆಕರ್ಷಕ ಅರ್ಧಶತಕದಿಂದಾಗಿ ಪಾಕಿಸ್ಥಾನವು 32.3 ಓವರ್‌ಗಳಲ್ಲಿ ಮೂರು ವಿಕೆಟಿಗೆ 205 ರನ್‌ ಗಳಿಸಿ ಜಯಭೇರಿ ಬಾರಿಸಿತು. ಇದು ಈ ಕೂಟದಲ್ಲಿ ಪಾಕ ಸಾಧಿಸಿದ ಮೂರನೇ ಗೆಲುವು ಸಾಗಿದೆ.

ಬಾಂಗ್ಲಾ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಶಫೀಕ್‌ ಮತ್ತು ಜಮಾನ್‌ ಅವರು ಮೊದಲ ವಿಕೆಟಿಗೆ 128 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವನ್ನು ಖಚಿತಪಡಿಸಿದ್ದರು. ಈ ಜೋಡಿಯನ್ನು ಮುರಿಯಲು ಬಾಂಗ್ಲಾ ಮಾಡಿದ ಎಲ್ಲ ಪ್ರಯತ್ನಗಳು ವಿಫ‌ಲವಾಗಿದ್ದವು. ಅಂತಿಮವಾಗಿ ಮೆಹಿದಿ ಹಸನ್‌ ಮಿರಾಜ್‌ ಈ ಜೋಡಿಯನ್ನು ಮುರಿದರು. 69 ಎಸೆತಗಳಿಂದ 68 ರನ್‌ ಗಳಿಸಿದ ಶಫೀಕ್‌ ಮೊದಲಿಗರಾಗಿ ಔಟಾದರು. ಅವರು 9 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.

ಆಬಳಿಕ ಜಮಾನ್‌ ಅವರನ್ನು ಸೇರಿಕೊಂಡ ನಾಯಕ ಬಾಬರ ಆಜಂ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಆದರೆ ಅವರಿಬ್ಬರು 9 ರನ್‌ ಅಂತರದಲ್ಲಿ ಮಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. 74 ಎಸೆತ ಎದುರಿಸಿದ ಅವರು 71 ರನ್‌ ಗಳಿಸಿದರು. 3 ಬೌಂಡರಿ ಮತ್ತು 7 ಸಿಕ್ಸರ್‌ ಬಾರಿಸಿದ್ದರು. ಮೊಹಮ್ಮದ್‌ ರಿಜ್ವಾನ್‌ ಮತ್ತು ಇಫ್ತಿಕಾರ್‌ ಅಹ್ಮದ್‌ ಮುರಿಯದ ನಾಲ್ಕನೇ ವಿಕೆಟಿಗೆ 36 ರನ್‌ ಪೇರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಮಹಮದುಲ್ಲ ಅರ್ಧಶತಕ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ ಆರಂಭದಲ್ಲಿಯೇ ಎಡವಿತು. ಇನ್ನೂ ರನ್‌ ಖಾತೆ ತೆರೆಯುವ ಮೊದಲೇ ತಂಡವು ತಾಂಜಿದ್‌ ಹಸನ್‌ ಅವರನ್ನು ಕಳೆದುಕೊಂಡಿತು. ಆದರೆ ಲಿಟನ್‌ ದಾಸ್‌, ಶಕಿಬ್‌ ಅಲ್‌ ಹಸನ್‌ ಮತ್ತು ಮಹಮದುಲ್ಲ ಅವರ ತಾಳ್ಮೆಯ ಆಟದಿಂದಾಗಿ ತಂಡ 200ರ ಗಡಿ ದಾಟಲು ಯಶಸ್ವಿಯಾಯಿತು. ಅವರಲ್ಲಿ ಮಹಮದುಲ್ಲ ಅವರು ಅರ್ಧಶತಕ ದಾಖಲಿಸಿ ಗಮನ ಸೆಳೆದರು.

23 ರನ್ನಿಗೆ ಮೂರು ವಿಕೆಟ್‌ ಕಳೆದುಕೊಐಡು ಒದ್ದಾಡುತ್ತಿದ್ದ ತಂಡಕ್ಕೆ ಲಿಟನ್‌ ದಾಸ್‌ ಮತ್ತು ಮಹಮದುಲ್ಲ ಆಸರೆಯಾಗಿ ನಿಂತರು. ಅವರಿಬ್ಬರು ನಾಲ್ಕನೇ ವಿಕೆಟಿಗೆ 79 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಕುಸಿದ ತಂಡವನ್ನು ಮೇಲಕ್ಕೆತ್ತಲು ನೆರವಾದರು. ಈ ಹಂತದಲ್ಲಿ 45 ರನ್‌ ಗಳಿಸಿದ ಲಿಟನ್‌ ಔಟಾದರು. ಸ್ವಲ್ಪ ಹೊತ್ತಿನ ಬಳಿಕ ಮಹಮದುಲ್ಲ ಕೂಡ ಔಟಾದರು. ಅವರು 70 ಎಸೆತ ಎದುರಿಸಿ 56 ರನ್‌ ಹೊಡೆದರು. 6 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು.

ಆರಂಭದಲ್ಲಿ ಬಾಂಗ್ಲಾದ ಕುಸಿತಕ್ಕೆ ಕಾರಣರಾದ ಶಾಹೀನ್‌ ಶಾ ಅಫ್ರಿದಿ 23 ರನ್ನಿಗೆ ಮೂರು ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಈ ನಿರ್ವಹಣೆ ವೇಳೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತೀವೇವಾಗಿ ನೂರು ವಿಕೆಟ್‌ ಕಿತ್ತು ಗಮನ ಸೆಳೆದರು. ಅವರು 51 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ ಮಿಚೆಲ್‌ ಸ್ಟಾರ್ಕ್‌ 52 ಪಂದ್ಯಗಳಿಂದ ನೂರು ವಿಕೆಟ್‌ ಉರುಳಿಸಿದ್ದರು.

ಕೊನೆ ಹಂತದಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್‌ ವಸೀಮ್‌ ಜೂನಿಯರ್‌ 31 ರನ್ನಿಗೆ ಮೂರು ವಿಕೆಟ್‌ ಪಡೆದರು. ಹ್ಯಾರಿಸ್‌ ರವೂಫ್ 36 ರನ್ನಿಗೆ ಎರಡು ವಿಕೆಟ್‌ ಕಿತ್ತರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ