Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸತ್ತು ಹೋದ ಬಿಜೆಪಿ ಪಕ್ಷದಲ್ಲಿ ಯಾವ ಕಂಪನವೂ ಇಲ್ಲ: ಮಾಜಿ ಸಿಎಂ ವೀರಪ್ಪ ಮೊಯ್ಲಿ

ಬೆಳಗಾವಿ : ಬಿಜೆಪಿಯಲ್ಲಿ ಒಂದು ರೀತಿ ಅತಂತ್ರತೆ ಕಾಡುತ್ತಿದ್ದು, ವಿರೋಧ ಪಕ್ಷದ ನಾಯಕರಿಲ್ಲದೇ ಬಿಜೆಪಿ ಡೆಡ್ ಆಗಿದೆ. ಸತ್ತು ಹೋದ ಬಿಜೆಪಿ ಪಕ್ಷದಲ್ಲಿ ಯಾವ ಕಂಪನವೂ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಊಹಾಪೋಹಗಳ ಬಗ್ಗೆ ನಾವು ಗಮನ ಕೊಡುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಯುವನಿಧಿಯನ್ನ ಜನವರಿಯಿಂದ ಜಾರಿ ಮಾಡುತ್ತೇವೆ ಎಂದರು.

ಐದು ವರ್ಷ ಸಿದ್ದರಾಮಯ್ಯನವರು ಸಿಎಂ ಇರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೈಕಮಾಂಡ್ ಅಲ್ಲ. ಆದರೆ ಐದು ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತೆ. ಐದು ವರ್ಷಗಳ ಕಾಲ ಸರ್ಕಾರ ಬೀಳಿಸುವುದು ಅಸಾಧ್ಯ. ಅದು ಬಿಜೆಪಿಯವರ ಕಸುಬು. ಆಪರೇಷನ್ ಕಮಲ ಮಾಡಿ ರುಚಿ ಹಿಡಿದಿದೆ. ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಅವರ ಆಶಯ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದರು.

ಎರಡೂವರೆ ವರ್ಷ ಬಳಿಕ ಸಿಎಂ ಬದಲಾವಣೆ ಒಪ್ಪಂದ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಒಪ್ಪಂದವೂ ಆಗಿಲ್ಲ. ಶಾಸಕರ ಅಭಿಪ್ರಾಯ ತೆಗೆದುಕೊಂಡು, ಹೈಕಮಾಂಡ್ ಆಯ್ಕೆ ಮೇಲೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮಂತ್ರಿ ಅಗಬೇಕು ಅನ್ನೋ ಆಸೆಯಿಂದ ಶಾಸಕರು ಮಾತಾಡಿದರೆ ಮುಂದಿನ ದಿನಗಳಲ್ಲಿ ಅವರಿಗೆ ಅದು ನೆಗೆಟಿವ್ ಆಗಲಿದೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ರೇಸ್ ಇಲ್ಲ. ನಾನು ನಿಷ್ಠಾವಂತನಾಗಿ ಸಾಯುವವರೆಗೂ ಕಾಂಗ್ರೆಸ್ ನಲ್ಲಿರುತ್ತೇನೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಬಣ್ಣ ಈಗ ಬಯಲಾಗಿದೆ. ತಾವಿಬ್ಬರೂ ಸೇರದಿದ್ದರೆ ಉಳಿಗಾಲವಿಲ್ಲ ಎಂದು ಹೆದರಿ ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಆಟಕ್ಕೆ ಫುಲ್ ಸ್ಟಾಪ್ ಇಡಲಿದ್ದಾರೆ ಎಂದರು.

ಸಚಿವ ಜಿ.ಪರಮೇಶ್ವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಆಯೋಜಿಸಿರುವ ಡಿನ್ನರ್ ಪಾರ್ಟಿಗೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸದ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, ‘ಇದು ಸೌಹಾರ್ದಯುತ ಭೇಟಿ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಎಲ್ಲ ನಾಯಕರನ್ನೂ ಇದಕ್ಕೆ ಆಹ್ವಾನಿಸಬೇಕು ಎಂದೇನೂ ಇಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ’ ಎಂದು ಉತ್ತರಿಸಿದರು.

ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಹೋಗ್ತಿರುವ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಬಳಿ ನಾನು ಸಮಾಲೋಚನೆ ಮಾಡಿಲ್ಲ. ಅವರ ವೈಯಕ್ತಿಕ ವಿಚಾರಗಳಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ. ನಾನು ಅಧಿಕ ಪ್ರಸಂಗದ ರಾಜಕಾರಣಿ ಅಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ