Mysore
27
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಈ ಬಾರಿಯ ದಸರಾ ಯಶಸ್ವಿಯಾಗಿ ನೆರವೇರಿದೆ : ಹೆಚ್.ಸಿ ಮಹದೇವಪ್ಪ

ಮೈಸೂರು : ದಸರಾ ಪೂರ್ವಭಾವಿ ಸಭೆಯಲ್ಲಿ ಅದ್ದೂರಿ ದಸರಾ ಆಚರಣೆಗೆ ತೀರ್ಮಾನ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಿಂದ ಸರಳವೂ ಅಲ್ಲ, ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆಗೆ ಮುಂದಾದೆವು. ಈ ಮೂಲಕ ಎಲ್ಲರ ಸಹಕಾರದಿಂದ ದಸರಾ ಮಹೋತ್ಸವ ಯಶಸ್ವಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಹೇಳಿದ್ದಾರೆ.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿದೆ. ಮೈಸೂರು ದಸರಾ ವಿಶ್ವ ವಿಖ್ಯಾತಿ ಪಡೆದಿರುವುದರಿಂದ 10 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇಷ್ಟು ಜನ ಆಗಮಿಸಿದ್ದರು ಸಹ ಯಾವುದೇ ಅಹಿತಕರ ಘಟನೆ ನಡೆಯದೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಎಲ್ಲರ ಸಹಕಾರದಿಂದ ಸಾಂಪ್ರದಾಯಿಕ ದಸರಾವನ್ನು ಜನ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಷ ದಸರಾಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದ ಪೀಠಿಕೆ ಓದಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಸಂವಿಧಾನ ಬಗ್ಗೆ ತಿಳಿದವರು ಯಾರು ಈ ರೀತಿ ಮಾತನಾಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಸಿಎಂ ಹುದ್ದೆ ವಿಚಾರವಾಗಿ ಸ್ಪಷ್ಟನೆ ನೀಡಿದ ಮಹದೇವಪ್ಪ, ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರದಲ್ಲಿ ಮುಖ್ಯಮಂತ್ರಿ ಇದ್ದಾಗ ಆ ಹುದ್ದೆಯ ಬಗ್ಗೆ ಚರ್ಚೆ ಅನಗತ್ಯ. ಖಾಲಿ ಇಲ್ಲದ ಹುದ್ದೆಯ ಬಗ್ಗೆ ಚರ್ಚೆ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಪರಮೇಶ್ವರ್ ಮನೆಯಲ್ಲಿ ಊಟ ಬಿಟ್ಟು ಬೇರೇನೂ ಚರ್ಚೆ ಮಾಡಿಲ್ಲ. ಓನ್ಲಿ ಮುದ್ದೆ, ನೋ ಹುದ್ದೆ. ಪರಮೇಶ್ವರ್ ಊಟಕ್ಕೆ ಕರೆದಿದ್ದರು. ಡಿನ್ನರ್ ಕೂಟಕ್ಕೆ ರಾಜಕೀಯ ವ್ಯಾಖ್ಯಾನ ಸರಿಯಲ್ಲ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ